Home ಕರಾವಳಿ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗವು ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರಿಗೆ ಮನವಿ ಸಲ್ಲಿಸಿತು.


ಯಾವುದೇ ಪತ್ರಿಕೆ ಹಾಗೂ ಟಿವಿಯಲ್ಲಿ ಸುದ್ದಿ ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಹಣ ನೀಡಬೇಕಾದ ಅಗತ್ಯ ಇಲ್ಲ. ಆದರೂ ಕೆಲವು ನಕಲಿ ಪತ್ರಕರ್ತರು ಸುದ್ದಿಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿರುವ ಬಗ್ಗೆ ಸಂಘಕ್ಕೆ ದೂರುಗಳು ಬಂದಿವೆ. ಈ ರೀತಿ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿಗೆ ಇಳಿಯುವ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಅಧೀನ ಸಂಸ್ಥೆಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುಮಾರು 170 ಮಂದಿ ಸದಸ್ಯರು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಿ ಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಹೆಸರು ಹೇಳಿ ಹಣ ಸಂಗ್ರಹಿಸುವ, ವಸೂಲಿ ಮಾಡುವ ಹಾಗೂ ಬೆದರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವುದು ಸಂಘದ ಗಮನಕ್ಕೆ ಬಂದಿದೆ.


‘ನಮ್ಮ ಸಂಘದಿಂದ ನಮ್ಮ ಸದಸ್ಯರುಗಳಿಗೆ ಗುರುತಿನ ಚೀಟಿ ಮತ್ತು ವಾಹನ ಗಳಿಗೆ ಅಧಿಕೃತ ಮಿಡಿಯಾ ಸ್ಟಿಕ್ಕರನ್ನು ನೀಡಲಾಗಿದೆ. ಪತ್ರಕರ್ತರ ಹೆಸರಿನಲ್ಲಿ ಯಾರೇ ಹಣ ವಸೂಲಿಗೆ ಬಂದರೆ ಅಂತಹವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ನೀಡಬೇಕು ಮತ್ತು ನಮ್ಮ ಸಂಘದ ಗಮನಕ್ಕೂ ತರಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.
ನಿಯೋಗದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜತೆ ಕಾರ್ಯದರ್ಶಿಗಳಾದ ರಹೀಂ ಉಜಿರೆ, ಪ್ರಮೋದ್ ಸುವರ್ಣ, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ, ಜಿಲ್ಲಾ ಸಮಿತಿ ಸದಸ್ಯರಾದ ಮೈಕಲ್ ರೋಡಿಗ್ರಸ್, ಹರೀಶ್ ಬಲಾಯಿಪಾದೆ, ಸಂಘದ ಸದಸ್ಯರಾದ ಶಶಿಧರ ಮಾಸ್ತಿಬೈಲು, ದೀಪಕ್ ಜೈನ್, ದಿನೇಶ್ ಎಂ.ಎಚ್., ಚೇತನ್ ಮಟಪಾಡಿ, ಅಶ್ವತ್ ಆಚಾರ್ಯ, ಜಸ್ಟಿನ್ ಡಿಸಿಲ್ವ, ಗೋಪಾಲಕೃಷ್ಣ ಪಾದೂರು, ರಕ್ಷಿತ್ ಬೆಳಪು, ನಾಗರಾಜ ರಾವ್, ಬಾಲಚಂದ್ರ ಎಚ್. ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version