Home ಟಾಪ್ ಸುದ್ದಿಗಳು ಮಂತ್ರಿಮಂಡಲ ಪುನರ್ ರಚಿಸಿದ ಉದ್ಧವ್ ಠಾಕ್ರೆ

ಮಂತ್ರಿಮಂಡಲ ಪುನರ್ ರಚಿಸಿದ ಉದ್ಧವ್ ಠಾಕ್ರೆ

ನವದೆಹಲಿ: ಸೋಮವಾರ ಜೂನ್ 27ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಂಡಾಯ ಗುಂಪಿನ ಏಕನಾಥ ಶಿಂಧೆ ಸೇರಿ 15 ಶಾಸಕರ ಸಚಿವಗಿರಿ ಮತ್ತಿತರ ಜವಾಬ್ದಾರಿಗಳನ್ನು ಬೇರೆಯವರಿಗೆ ಹಂಚಿ ಸಚಿವ ಸಂಪುಟವನ್ನು ಪುನರ್ ರಚಿಸಿದ್ದಾರೆ.

ಸದ್ಯ ಹಾಜರಿಲ್ಲದ ಒಟ್ಟು ಐವರು ಮಂತ್ರಿಗಳ ಖಾತೆಗಳನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಬೇರೆಯವರಿಗೆ ಹಂಚಿದ್ದಾರೆ. ಸರಕಾರವು ಸರಳವಾಗಿ ನಡೆಯಲು ಏನು ಬೇಕೋ ಆ ಏರ್ಪಾಟು ಆಗಿದೆ ಎನ್ನಲಾಗಿದೆ. ಐವರಲ್ಲಿ ಶಿಂಧೆ ಸಂಪುಟ ದರ್ಜೆ ಸಚಿವರಾಗಿದ್ದರೆ ಇತರ ನಾಲ್ವರು ರಾಜ್ಯ ದರ್ಜೆ ಮಂತ್ರಿಗಳಾಗಿದ್ದರು.

ಏಕನಾಥ ಶಿಂಧೆ ಹೊಂದಿದ್ದ ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಯನ್ನು ಸುಭಾಷ್ ದೇಸಾಯಿಯವರಿಗೆ ನೀಡಲಾಗಿದೆ. ಗುಲಾಬ್ ರಾವ್ ರಘುನಾಥ್ ಪಾಟೀಲ್ ಹೊಂದಿದ್ದ ನೀರು ಪೂರೈಕೆ ಮತ್ತು ಸ್ಯಾನಿಟೇಶನ್ ಇಲಾಖೆಯನ್ನು ಅನಿಲ್ ದತ್ತಾತ್ರೇಯ ಪರಬ್ ಅವರಿಗೆ ವಹಿಸಿ ಕೊಡಲಾಗಿದೆ.

ಮಹಾರಾಷ್ಟ್ರ ಸರಕಾರದ ಬಿಕ್ಕಟ್ಟು ಇನ್ನೂ ಮುಂದುವರಿದಿರುವುದರ ನಡುವೆ ಜೂನ್ 27ರಂದು ಇಡಿ- ಜಾರಿ ನಿರ್ದೇಶನಾಲಯವು ಸಂಜಯ್ ರಾವುತ್ ಗೆ ಸಮನ್ಸ್ ಜಾರಿ ಮಾಡಿದೆ. ಜೂನ್ 28ರ ಮಂಗಳವಾರ ಹಾಜರಾಗಿ ಮುಂಬಯಿಯ ಗೋರೆಗಾಂವ್ ನ ಪತ್ರಾ ಚಾಳ್ ಮರು ಅಭಿವೃದ್ಧಿ ಭ್ರಷ್ಟಾಚಾರದ ಬಗೆಗೆ ಪ್ರಶ್ನೆ ಎದುರಿಸಲು ರಾವುತ್ ರಿಗೆ ಜಾನಿ ಸಮನ್ಸ್ ನೀಡಿದೆ.

ಸುಪ್ರೀಂ ಕೋರ್ಟು ಇಂದು ಎರಡು ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡಿತು. ಒಂದು ಬಂಡಾಯ ಗುಂಪಿನ ಏಕನಾಥ ಶಿಂಧೆಯವರದ್ದು, ಇನ್ನೆರಡು 15 ಜನ ಬಂಡಾಯ ಗುಂಪಿನ ಶಾಸಕರದ್ದು.

ಉಪಸಭಾಪತಿ ನರಹರಿ ಜೀರ್ ವಾಲ್ ಅವರು ಶಿಂಧೆಯವರ ಬದಲು ಅಜಯ್ ಚೌಧರಿಯವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಎಂದು ಒಪ್ಪಿಕೊಂಡಿದ್ದನ್ನು ಒಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇನ್ನೊಂದು ಅರ್ಜಿಯಲ್ಲಿ ಶಿಂಧೆ ಮತ್ತು 15 ಶಾಸಕರನ್ನು ಅನರ್ಹಗೊಳಿಸುವ ಉಪ ಸಭಾಪತಿಯವರ ನೋಟಿಸುಗಳನ್ನು ಪ್ರಶ್ನಿಸಿದ್ದಾಗಿದೆ.

Join Whatsapp
Exit mobile version