ಶಿವಮೊಗ್ಗ: ಶೀತ, ಜ್ವರದ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 14 ಮಕ್ಕಳು ಭಾನುವಾರ ಸಂಜೆ ದಿಢೀರನೆ ಅಸ್ವಸ್ಥತರಾಗಿರುವ ಘಟನೆ ಶಿವಮೊಗ್ಗದ ಸಾಗರದಲ್ಲಿ ನಡೆದಿದೆ. ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಇದು ನಡೆದಿದೆ ಎಂದು ಹೇಳಲಾಗುತ್ತಿದೆ.
ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸಾಗರ ಹಾಗೂ ಸೊರಬ ತಾಲೂಕಿನ ಹಲವು ಮಕ್ಕಳು ಶೀತ, ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಸಂಜೆ ದಾದಿಯರು ಆಂಟಿಬಯೋಟಿಕ್ ಇರುವ ಚುಚ್ಚುಮದ್ದು ನೀಡಿದ್ದಾರೆ. ದುರದೃಷ್ಟವಶಾತ್ ಅಜಾಗರೂಕತೆಯಿಂದ ಡೋಸ್ ಮಿಶ್ರಣ ಏರುಪೇರಾದ ಪರಿಣಾಮ ವಾರ್ಡ್ ಲ್ಲಿದ್ದ ಎಲ್ಲಾಹದಿನಾಲ್ಕು ಮಕ್ಕಳ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಿದ್ದು, ಮಕ್ಕಳು ತಕ್ಷಣ ನಿತ್ರಾಣಗೊಂಡಿದ್ದರು. ಅದರಲ್ಲೂ ನಾಲ್ಕು ಮಕ್ಕಳು ತೀವ್ರ ಜ್ವರದಿಂದ ಅಸ್ವಸ್ಥಗೊಂಡಿದ್ದರು.
‘ಯಾವ ಕಾರಣಕ್ಕೆ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅಸ್ವಸ್ಥರಾಗಿರುವ ಮಕ್ಕಳ ಪೈಕಿ ನಾಲ್ವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳಿಸಲಾಗಿದೆ. ಯಾವುದೇ ಮಕ್ಕಳಿಗೂ ಪ್ರಾಣಾಪಾಯವಿಲ್ಲ’ ಎಂದು ಸರ್ಕಾರಿ ಆಸ್ಪತ್ರೆಯ ನಿಯೋಜಿತ ವೈದ್ಯ ಪ್ರಕಾಶ್ ಭೋಸ್ಲೆ ತಿಳಿಸಿದ್ದಾರೆ.
ಇಂಜೆಕ್ಷನ್ ಡೋಸ್ ಮಿಕ್ಸಿಂಗ್ ನಲ್ಲಿ ಪ್ರಮಾಣ ಪರಿಶೀಲಿಸದೇ ಆದ ಅಚಾತುರ್ಯ ಘಟನೆಗೆ ಕಾರಣವಾಗಿರಬಹುದು ಎಂದು ಶಿವಮೊಗ್ಗ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ಶ್ರೀಧರ್ ಹೇಳಿದ್ದಾರೆ.