ಮಲಪ್ಪುರಂ: ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಯುಎಪಿಎ ಪ್ರಕರಣದಡಿಯಲ್ಲಿ ಬಂಧಿತ ಆರೋಪಿಯಾದ ಕೇರಳದ ಪತ್ರಿಕೋದ್ಯಮ ವಿದ್ಯಾರ್ಥಿ ತ್ವಾಹಾ ಫಸಲ್ ಗೆ ಸುಪ್ರೀಮ್ ಕೋರ್ಟ್ ಗುರುವಾರ ಜಾಮೀನು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಎನ್.ಐ.ಎ ವಿಶೇಷ ನ್ಯಾಯಾಲಯ ಫಸಲ್ ಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಈ ಹಿಂದೆ ಇವರ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದ್ದು, ಜಾಮೀನಿಗಾಗಿ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಅಭಯ್ ಶ್ರೀನಿವಾಸ್ ಅವರನ್ನೊಳಗೊಂಡ ಪೀಠ ಜಾಮೀನು ನೀಡಿದೆ.
ಪ್ರಸಕ್ತ ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿರುವ ಸಹ – ಆರೋಪಿ ಅಲ್ಲನ್ ಶುಹೈಬ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿ ಫಸಲ್ ತ್ವಾಹಾ ಪರ ಹಿರಿಯ ವಕೀಲರಾದ ಜಯಂತಿ ರಾಜ್, ಅಲ್ಲನ್ ಶುಹೈಬ್ ಪರ ಆರ್. ಬಸಂತ್ ನ್ಯಾಯಾಲಯದಲ್ಲಿ ವಾದಿಸಿದರು.
ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳನ್ನು ಮಾವೋವಾದಿಗಳೊಂದಿಗೆ ನಂಟಿನ ಆರೋಪದಲ್ಲಿ ನವೆಂಬರ್ 2019 ರಲ್ಲಿ ಬಂಧಿಸಲಾಗಿತ್ತು.