ದುಬೈ: ಇತ್ತೀಚೆಗೆ ನಗರದ ಪ್ರಮುಖ ರಸ್ತೆಯೊಂದರಲ್ಲಿ ಬಿದ್ದಿದ್ದ ಕಾಂಕ್ರೀಟ್ ಬ್ಲಾಕ್’ವೊಂದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ನೆರವಾದ ತಲಾಬತ್ ಕಂಪೆನಿಯ ಫುಡ್ ಡೆಲಿವರಿ ಬಾಯ್ ಅಬ್ದುಲ್ ಗಫೂರ್ ಅಬ್ದುಲ್ ಹಕೀಮ್ ಅವರನ್ನು ದುಬೈ ರಾಜಕುಮಾರ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಪ್ರಶಂಸಿಸಿದ್ದಾರೆ.
ದುಬೈನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿರುವ ಪಾಕಿಸ್ತಾನ ಮೂಲದ ಅಬ್ದುಲ್ ಗಫೂರ್ ಅವರು ರಸ್ತೆಯಲ್ಲಿ ಬಿದ್ದಿದ್ದ ಕಾಂಕ್ರೀಟ್ ಬ್ಲಾಕ್ ಅನ್ನು ತೆರವುಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈ ವೀಡಿಯೋ ವೀಕ್ಷಿಸಿದ್ದ ದುಬೈ ರಾಜಕುಮಾರ್ ಶೇಖ್ ಹಮ್ದಾನ್ ಅವರು ಒಳ್ಳೆಯತನದ ಕಾರ್ಯ ಪ್ರಶಂಸೆಗೆ ಅರ್ಹವಾಗಿದೆ. ಯಾರಾದದೂ ಈತನನ್ನು ನನಗೆ ತೋರಿಸಬಹುದೇ ಎಂದು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ, ಅಬ್ದುಲ್ ಗಫೂರ್ ಅವರನ್ನು ಶೀಘ್ರದಲ್ಲೇ ಭೇಟಿಯಾಗುವುದಾಗಿಯೂ ಟ್ವೀಟ್’ನಲ್ಲಿ ಬರೆದಿದ್ದರು.
ಯುಕೆಯಿಂದ ಸ್ವದೇಶಕ್ಕೆ ಮರಳಿದ ಬಳಿಕ ರಾಜಕುಮಾರ ಶೇಖ್ ಹಮ್ದಾನ್ ಅವರು ಮಾದರಿ ಕೆಲಸ ಮಾಡಿದ ಗಫೂರ್ ರವರನ್ನು ಭೇಟಿಯಾಗಿ ಪ್ರಶಂಸಿಸಿದ್ದಾರೆ. ಗಫೂರ್ ಅವರ ಭುಜದ ಮೇಲೆ ತನ್ನ ತೋಳನ್ನು ಹಾಕಿರುವ ಫೋಟೋವೊಂದನ್ನು ಶೇಖ್ ಹಮ್ದಾನ್ ಅವರೇ ಖುದ್ದು ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದ್ದು, ಇದು ನಾನು ಅವರಿಗೆ ನೀಡುವ ಅತ್ಯುತ್ತಮ ಗೌರವವಾಗಿದೆ. ಅವರನ್ನು ಅನುಕರಣೆ ಮಾಡಬೇಕಾದ ಮಾದರಿ ಕಾರ್ಯ ಎಂದು ಉಲ್ಲೇಖಿಸಿದ್ದಾರೆ.
ಜುಲೈ 31 ರಂದು ಅಬ್ದುಲ್ ಗಫೂರ್ ಅವರ ಈ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಗೆ ತೊಂದರೆ ನೀಡಬಲ್ಲ ಭಾರವಾದ ಕಾಂಕ್ರೀಟ್ ಬ್ಲಾಕ್ ಅನ್ನು ತನ್ನ ಬೈಕಿನಿಂದ ಇಳಿದು ರಸ್ತೆಯಿಂದ ತೆರವುಗೊಳಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು.