Home ಕರಾವಳಿ ವಿಧಾನಸಭೆಯ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ: ಮಂಗಳೂರು (ಉಳ್ಳಾಲ) ರಾಜಕಾರಣಿಯ ಹಾದಿ….

ವಿಧಾನಸಭೆಯ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ: ಮಂಗಳೂರು (ಉಳ್ಳಾಲ) ರಾಜಕಾರಣಿಯ ಹಾದಿ….

ಬಂಟ್ವಾಳ ವೈಕುಂಠ ಬಾಳಿಗಾ ಬಳಿಕ ಕರಾವಳಿಗೆ ಒಲಿದ ಸ್ಪೀಕರ್ ಸ್ಥಾನ


ಮಂಗಳೂರು: ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ಆಯ್ಕೆ ಬಹುತೇಕ ಖಚಿತವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಖಾದರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಒಟ್ಟು 5 ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಚಿವರಾಗಿ, ವಿಪಕ್ಷ ಉಪನಾಯಕರಾಗಿಯೂ ಸೇವೆ ಸಲ್ಲಿಸಿರುವ ಇವರಿಗೆ ಇದೀಗ ವಿಧಾನಸಭಾ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.


ಯ.ಟಿ ಖಾದರ್ ಅವರ ಪರಿಚಯ
ಖಾದರ್ ಅವರು 1969 ಅಕ್ಟೋಬರ್ 12 ರಂದು ಮಂಗಳೂರಿನಲ್ಲಿ ಯು.ಟಿ.ಫರೀದ್ ಖಾದರ್, ಯು.ಟಿ.ನಸೀಮಾ ಫರೀದ್ ದಂಪತಿಗೆ ಜನಿಸಿದ್ದರು.
ತಂದೆ ಯು.ಟಿ.ಫರೀದ್ ಅವರು 1972, 1978, 1999, 2004 ರಲ್ಲಿ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಖಾದರ್ ಅವರು ತನ್ನ LKG ಶಿಕ್ಷಣವನ್ನು ರೋಶನಿ ನಿಲಯದಲ್ಲಿ, ಒಂದರಿಂದ ನಾಲ್ಕನೇ ತರಗತಿ ವರೆಗೆ ಸೈನ್ಟ್ ಜೆರೋಝ,ನಾಲ್ಕನೇ ತರಗತಿಯಿಂದ ಪ್ರೌಢ ಶಿಕ್ಷಣದ ವರೆಗೆ ಸೈನ್ಟ್ ಅಲೋಶಿಯಸ್ ನಲ್ಲಿ ,ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಕಲಿತು ನಂತರ SDM ಕಾಲೇಜಿನಲ್ಲಿ BA,LLB ಪಧವಿ ಶಿಕ್ಷಣ ಮುಗಿಸಿದರು.

ಹವ್ಯಾಸ : ಬೈಕ್ ಹಾಗೂ ಕಾರ್ ರೇಸ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮೋಟೋ ರೇಸ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದರು.ಕ್ರೀಡೆಯಲ್ಲಿ ಕೂಡ ಆಸಕ್ತಿ ಹೊಂದಿದ್ದು ಕ್ರಿಕೆಟ್,ಫೂಟ್ಬಾಲ್,ವಾಲಿಬಾಲ್,ಹಾಕಿ,ಟೆನ್ನಿಸ್ ಹಾಗೂ ಇತರ ಕ್ರೀಡೆಗಳನ್ನು ಆಡುತ್ತಿದ್ದರು.

ರಾಜಕೀಯ ವಿವರ
1990ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,1994 ರಿಂದ 1999ರ ವರೆಗೆ NSUI ಜಿಲ್ಲಾಧ್ಯಕ್ಷರಾಗಿ,1999 ರಿಂದ 2001 ರ ವರೆಗೆ NSUI ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.2003 ರಲ್ಲಿ ಘಟಪ್ರಭ ದಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ,2004 ರಲ್ಲಿ ಹಿಮಾಚಲ ಪ್ರದೇಶದ ಕಂದಘಾಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ 2005ರಲ್ಲಿ ಸೇವಾದಳದ ಹೆಚ್ಚುವರಿ ಮುಖ್ಯ ಸಲಹೆಗಾರರಾಗಿ ಆಯ್ಕೆಯಾಗಿದ್ದರು.ನಂತರ ಕೆಪಿಸಿಸಿ ಸದಸ್ಯರಾಗಿ 2008 ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.


ಚುನಾವಣಾ ರಾಜಕೀಯ
2008 ರಲ್ಲಿ ತಮ್ಮ ತಂದೆಯವರ ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ನಂತರ 2008,2013,2018 ಹಾಗೂ 2023 ರಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾದರು.ಅಲ್ಲದೆ ತಾವು ಶಾಸಕರಾಗಿದ್ದ 2008 ರಿಂದ 2013 ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಗಳಿಸಿದರು.


2013ರ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಕಾರ್ಯ ನಿರ್ವಹಿಸಿದರು.ಈ ಅವಧಿಯಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ,ಬೈಕ್ ಅಂಬ್ಯುಲೆನ್ಸ್,108,ಆರೋಗ್ಯಶ್ರೀ,ದಂತ ಭಾಗ್ಯ,ಸರಕಾರೀ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ,ಹರೀಶ್ ಸಾಂತ್ವನ ಯೋಜನೆ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಸರಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಕೂಡ ತನ್ನದಾಗಿಸಿ ಕೊಂಡಿದ್ದರು.

ನಂತರ 2016 ರಿಂದ 2018 ರ ತನಕ ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿ,ಬಡವರು ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10 ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಕ್ರಾಂತಿಕಾರಿ ಯೋಜನೆಗೆ ಚಾಲನೆ ನೀಡಿ ಇತಿಹಾಸ ಸೃಷ್ಟಿಸಿದರು.ಬಿಪಿಎಲ್ ಕಾರ್ಡು ಪಡೆಯಲು ನಿಗದಿಪಡಿಸಿದ್ದ ಆದಾಯ ಮಿತಿಯನ್ನು ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಿದ್ದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಪಡೆಯಲು ನೆರವಾದರು.

2018 ರ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಯೋಜನೆಗಳನ್ನು ಪರಿಚಯಿಸಿ ಯಶಶ್ವಿಯಾದರು.ಈ ಸಂದರ್ಭದಲ್ಲಿ ಕರ್ನಾಟಕ ವಸತಿ ನಿಗಮದ ಅಧ್ಯಕ್ಷರಾಗಿ,ಕರ್ನಾಟಕ ನಗರನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ,ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ನ ಅಧ್ಯಕ್ಷರಾಗಿ,ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

2021 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023 ರ ವರೆಗೆ ಕಾರ್ಯ ನಿರ್ವಹಿಸಿ ಪ್ರತೀ ಹಂತದಲ್ಲೂ ಸರಕಾರದ ನ್ಯೂನತೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸೈ ಎನಿಸಿ ಕೊಂಡರು.

Join Whatsapp
Exit mobile version