ಪುಣೆ: ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಕಪೋಲಕಲ್ಪಿತ ವೀಡಿಯೋ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಆರೋಪದಲ್ಲಿ ಪೋರ್ಟಲ್ ನ್ಯೂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಪತ್ರಕರ್ತರನ್ನು ಮುಂಬೈ ಪೊಲೀಸ್ ವಿಭಾಗದ ಸೈಬರ್ ಸೆಲ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಪತ್ರಕರ್ತರು ಉತ್ತರ ಪ್ರದೇಶದ ಮೂಲದವರಾಗಿದ್ದು, ಇವರ ವಿರುದ್ಧ ಪಶ್ಚಿಮ ವಲಯ ಸೈಬರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 (ಎ), 506(2), 509, 500 ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿ ಜೈ ಪ್ರಕಾಶ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಪತ್ರೆಕರ್ತೆ ರಾಣಾ ಅಯ್ಯೂಬ್, ಅತ್ಯಂತ ಕೀಳುಮಟ್ಟದ ಸುಳ್ಳು ಸುದ್ದಿ ಬಿತ್ತರಿಸಿದ ಇಬ್ಬರು ಪತ್ರಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದು ನ್ಯಾಯದ ದಿಕ್ಕಿನತ್ತಾ ಒಂದು ದೊಡ್ಡ ಹೆಜ್ಜೆಯಾಗಿದೆ. ಇದಕ್ಕೆ ನಾನು ಮುಂಬೈ ಪೊಲೀಸರಿಗೆ ಧನ್ಯವಾದ ಸಮರ್ಪಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.