ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಯೊಬ್ಬನ ಬ್ಯಾಗ್’ನಲ್ಲಿ ಗಾಂಜಾ ಇರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಬಂಡೇಪಾಳ್ಯ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಇಬ್ಬರು ಪೇದೆಗಳನ್ನು ಸೇವೆಯಿಂದ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ವಿಚಾರಣೆಯು ಮುಕ್ತಾಯಗೊಂಡಿದ್ದು, ವಿಚಾರಣಾಧಿಕಾರಿ ನೀಡಿದ ವರದಿ ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಬಾಬಾ ಹೇಳಿದ್ದಾರೆ.
ಕಳೆದ ವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದ ಎಚ್ ಎಸ್ ಆರ್ ಲೇಔಟ್ ನ ಖಾಸಗಿ ಕಂಪನಿ ಉದ್ಯೋಗಿ ವೈಭವ್ ಪಾಟೀಲ್ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ನೋವಿನಿಂದ ಬರೆದುಕೊಂಡು ಅನಗತ್ಯವಾಗಿ ನನ್ನನ್ನು ಮಾದಕ ವಸ್ತು ಕಾಯ್ದೆ ಪ್ರಕರಣಕ್ಕೆ ಸಿಲುಕಿಸಲಾಗುತ್ತಿದೆ ಎಂದು ದೂರಿದ್ದರು.
ಸಂತ್ರಸ್ತ ಪಾಟೀಲ್, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜ.13ರಂದು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ನನ್ನ ಹೇಳಿಕೆ ದಾಖಲಿಸಿದೆ. ಇಬ್ಬರು ಪೊಲೀಸ್ ಕಾನ್ಸ್’ಟೆಬಲ್’ಗಳನ್ನು ಗುರುತಿಸಿದೆ. ನನ್ನ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ನೀಡಿದ್ದೇನೆ. ಮರುದಿನವೂ ಪೊಲೀಸ್ ಠಾಣೆಗೆ ಭೇಟಿ ನೀಡಿ ನನ್ನ ಖಾಯಂ ವಿಳಾಸ ಮತ್ತಿತರ ವಿವರಗಳನ್ನು ಕೊಟ್ಟೆ’ ಎಂದು ವಿವರಿಸಿದರು.
ನನ್ನ ದೂರು ನಿರಾಕರಿಸಿದ್ದ ಕಾನ್ಸ್’ಟೆಬಲ್’ಗಳು, ‘ನಾನು ತಪಾಸಣೆಗೆ ಒಳಪಡಲು ನಿರಾಕರಿಸಿದ್ದಾಗಿ ಹಾಗೂ ನನ್ನಿಂದ ಹಣ ಪಡೆಯಲಿಲ್ಲ’ ಎಂದು ಹೇಳಿದರು. ಇದನ್ನು ನಾನು ಇದನ್ನು ಒಪ್ಪಲಿಲ್ಲ. ಆಗಲೂ ನನ್ನನ್ನು ತಪಾಸಣೆಗೆ ಒಳಪಡಿಸಬಹುದು. ಒಂದು ವೇಳೆ ನನ್ನ ಬಳಿ ಮಾದಕವಸ್ತು ಇದ್ದಿದ್ದೇ ಆದರೆ ನನ್ನನ್ನು ಇವರು ಮುಂದೆ ಹೋಗಲು ಬಿಟ್ಟಿದ್ದಾದರೂ ಹೇಗೆ ಎಂದು ಪ್ರಶ್ನಿಸಿದೆ’ ಎಂದು ಹೇಳಿದರು.
ಆರು ತಿಂಗಳ ಹಿಂದೆ ಹಿಮಾಚಲ ಪ್ರದೇಶದಿಂದ ನಗರಕ್ಕೆ ಪಾಟೀಲ್ ಬಂದಿದ್ದು, ಎಚ್ ಎಸ್ ಆರ್ ಲೇಔಟ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅವರು ತಿಂಗಳಿಗೆ ಸುಮಾರು 22 ಸಾವಿರ ವೇತನ ಪಡೆಯುತ್ತಿದ್ದಾರೆ.