Home ಟಾಪ್ ಸುದ್ದಿಗಳು ರಾಜ್ಯದ ಪ್ರತಿ ಕುಟುಂಬದ ಗೃಹಿಣಿಗೆ ಪ್ರತಿ ತಿಂಗಳು 2,000 ರೂ.ಆರ್ಥಿಕ ನೆರವು: ಪ್ರಿಯಾಂಕಾ ಗಾಂಧಿ ಘೋಷಣೆ

ರಾಜ್ಯದ ಪ್ರತಿ ಕುಟುಂಬದ ಗೃಹಿಣಿಗೆ ಪ್ರತಿ ತಿಂಗಳು 2,000 ರೂ.ಆರ್ಥಿಕ ನೆರವು: ಪ್ರಿಯಾಂಕಾ ಗಾಂಧಿ ಘೋಷಣೆ

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೆಲೆಯೇರಿಕೆಯಿಂದ ದಿಕ್ಕೆಟ್ಟ ರಾಜ್ಯದ ಪ್ರತಿ ಕುಟುಂಬದ ಗೃಹಿಣಿಗೆ ಪ್ರತಿ ತಿಂಗಳು 2,000 ರೂ. ಆರ್ಥಿಕ ನೆರವು ನೀಡುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ನಾ ನಾಯಕಿ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಅಗತ್ಯ ಯೋಜನೆಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಣೆ ಮಾಡಲು ತೀರ್ಮಾನಿಸಿದೆ ಎಂದರು.

ಈ ನಾ ನಾಯಕಿ ಕಾರ್ಯಕ್ರಮ ಮೂಲಕ ನೀವು ನಾಯಕರಾಗುವ ಮೂಲಕ ನಿಮ್ಮ ಜೀವನ ಬದಲಿಸಿಕೊಳ್ಳಿ. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲಾಗುವುದು. ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ನೀವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮಾಡಿದರೆ ಮಾತ್ರ ನಾನು ಈ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೆ. ಮಹಿಳೆಯರು ಸಶಕ್ತರಾಗಲು ಕೇವಲ ಒಂದು ಕಾರ್ಯಕ್ರಮ ನೀಡುತ್ತಿಲ್ಲ. ಅನೇಕ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನೆರವು ನೀಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇತ್ತೀಚೆಗೆ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಹಿಳಾ ಪ್ರಣಾಳಿಕೆ ಮೂಲಕ ಇನ್ನಷ್ಟು ಜನಪರ ಕಾರ್ಯಕ್ರಮವನ್ನು ನಮ್ಮ ನಾಯಕರು ನೀಡಲಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ನೀವು ಬಲಿಷ್ಠ ಕರ್ನಾಟಕದ ಮೇಲೆ ನಂಬಿಕೆ ಇಟ್ಟೀದ್ದೀರಿ ಅಲ್ಲವೇ? ಇದಕ್ಕಾಗಿ ನೀವು ಬದಲಾವಣೆ ತರುತ್ತೀರಾ ಅಲ್ಲವೇ? ಇದು ನಿಮ್ಮ ಕೈಯಲ್ಲಿದೆ. ನಿಮ್ಮ ಸಮಾಜ, ರಾಜ್ಯದ ಬದಲಾವಣೆ ತರುವ ಶಕ್ತಿ ನಿಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಾಗಿ ನಿಮ್ಮ ನಾಯಕರು ನಿಮ್ಮ ಬಳಿಗೆ ಬಂದಾಗ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕೇಳುವುದಾಗಿ ನನಗೆ ಮಾತು ಕೊಡಿ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ಹಲವರು ನಮ್ಮನ್ನು ನೋಡಿ ನಕ್ಕರು. ಆದರೂ ನಮಗೆ ಹೆಚ್ಚಿನ ಮತಗಳು ಬರಲಿಲ್ಲ. ಆದರೆ ಪ್ರತಿ ರಾಜಕೀಯ ಪಕ್ಷಗಳು ಮಹಿಳೆಯರ ಆಗತ್ಯವನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವಂತೆ ಮಾಡಿದೆವು. ಪರಿಣಾಮ ಇಂದು ಬಿಜೆಪಿ ಕೂಡ ತಾನು ಮಹಿಳೆಯರಿಗಾಗಿ ಏನು ಮಾಡುತ್ತೇವೆ ಎಂದು ಜಾಹೀರಾತು ನೀಡಿದೆ. ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ. ಈ ಚುನಾವಣೆಯನ್ನು ನಿಮ್ಮ ಚುನಾವಣೆ, ನಿಮ್ಮ ಭವಿಷ್ಯಕ್ಕಾಗಿ ಮಾಡಬೇಕಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Join Whatsapp
Exit mobile version