ಹುಬ್ಬಳ್ಳಿ: ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ ಮತ್ತು ಶಿವರಾಮ ಹೆಬ್ಬಾರ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಮಾಹಿತಿ ಇದ್ದು, ಅವರಿಬ್ಬರು ಸದ್ಯದಲ್ಲಿಯೇ ನಮ್ಮ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ”ಬಿಜೆಪಿ ಶಾಸಕರಷ್ಟೇ ಅಲ್ಲದೆ ಜೆಡಿಎಸ್ ಪಕ್ಷದ ಮುಖಂಡರು ಸಹ ಕಾಂಗ್ರೆಸ್ ಸೇರ್ಪಡೆಗೆ ಉತ್ಸುಕರಾಗಿದ್ದಾರೆ,” ಎಂದರು.
”ಎಸ್ಟಿ ಸೋಮಶೇಖರ ಹಾಗೂ ಶಿವರಾಮ್ ಹೆಬ್ಬಾರ್ ಇಬ್ಬರೂ ಈಗಾಗಲೇ ನಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಜತೆಗೆ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನ್ನು ಸ್ವಾಗತಿಸಿದ್ದಾರೆ. ಸದ್ಯದಲ್ಲಿಯೇ ಸೂಕ್ತ ಸಮಯ ನೋಡಿ ಅವರನ್ನು ಪಕ್ಷದ ವರಿಷ್ಠರು ಸೇರ್ಪಡೆ ಮಾಡಿಕೊಳ್ಳುವ ವಿಶ್ವಾಸವಿದೆ,” ಎಂದರು.
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳು ಸಮಗ್ರವಾಗಿ ತನಿಖೆ ನಡೆಸುತ್ತಿವೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸರಕಾರ ಮತ್ತು ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ, ಎಂದರು.







