ಉಡುಪಿ: ಬುಧವಾರ ಸಂಜೆ 4:30ಕ್ಕೆ ಮಣಿಪಾಲದ ಟೈಗರ್ ಸರ್ಕಲ್ ಬಳಿಯ ಬಸ್ ನಿಲ್ದಾಣದಲ್ಲಿ ಟೈಮಿಂಗ್ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಖಾಸಗಿ ಬಸ್ ನ ನಿರ್ವಾಹಕ ಮತ್ತು ಬಸ್ ನ ಚಾಲಕನನ್ನು ಬಂಧಿಸಲಾಗಿದೆ.
ಆರೋಪಿಗಳಾದ ಆನಂದ್ ಬಸ್ ನ ಕಂಡಕ್ಟರ್ ವಿಜಯ ಕುಮಾರ್ ಚಿತ್ರದುರ್ಗ(25) ಹಾಗೂ ಮಂಜುನಾಥ ಬಸ್ಸಿನ ಚಾಲಕ ಉಚ್ಚಿಲ ಮೊಹಮ್ಮದ್ ಆಲ್ಪಾಝ್(25) ಟೈಮಿಂಗ್ ವಿಚಾರವಾಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಓರ್ವ ರಾಜಾರೋಷವಾಗಿ ಕಬ್ಬಿಣದ ರಾಡ್ ಹಿಡಿದು ಬೆದರಿಸುವ ರೀತಿ ವರ್ತಿಸಿದ್ದು ಬಸ್ ನಿಲ್ದಾಣದಲ್ಲಿ ಇದ್ದ ಪ್ರಯಾಣಿಕರು ಈತನ ವರ್ತನೆ ಕಂಡು ಬೆಚ್ಚಿಬಿದ್ದಿದ್ದರು.
ಘಟನೆ ಬಗ್ಗೆ ಬಸ್ಸಿನ ಕಂಡಕ್ಟರ್ ಮತ್ತು ಚಾಲಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಾಗೂ ಬಸ್ ಗಳನ್ನು ವಶಕ್ಕೆ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.