Home ಟಾಪ್ ಸುದ್ದಿಗಳು ಸುದ್ದಿತಾಣ, ಪತ್ರಕರ್ತರ ಖಾತೆಗಳ ವಿರುದ್ಧ ಕ್ರಮ ಇಲ್ಲ : ಸರಕಾರದ ಸೂಚನೆಗೆ ಟ್ವಿಟರ್ ಪ್ರತಿಕ್ರಿಯೆ

ಸುದ್ದಿತಾಣ, ಪತ್ರಕರ್ತರ ಖಾತೆಗಳ ವಿರುದ್ಧ ಕ್ರಮ ಇಲ್ಲ : ಸರಕಾರದ ಸೂಚನೆಗೆ ಟ್ವಿಟರ್ ಪ್ರತಿಕ್ರಿಯೆ

ನವದೆಹಲಿ : ರೈತರ ಪ್ರತಿಭಟನೆ ಕುರಿತಂತೆ ಸುಳ್ಳು ಮಾಹಿತಿಗಳನ್ನು ಹರಡುತ್ತಿವೆ ಮತ್ತು ಪ್ರಚೋದನಕಾರಿ ಬರಹಗಳನ್ನು ಹೊಂದಿವೆ ಎಂದು ಆಪಾದಿಸಿ ಭಾರತ ಸರಕಾರ 1,178 ಖಾತೆಗಳನ್ನು ರದ್ದು ಮಾಡುವಂತೆ ಟ್ವಿಟರ್ ಗೆ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್ ಗೆ ಉತ್ತರಿಸಿರುವ ಟ್ವಿಟರ್, ಸರಕಾರದ ಆದೇಶವು ಕಾನೂನಿಗೆ ಪೂರಕವಾಗಿಲ್ಲ ಎಂದಿದೆ. ಅಲ್ಲದೆ ಸುದ್ದಿ ತಾಣಗಳು, ಪತ್ರಕರ್ತರು, ರಾಜಕಾರಣಿಗಳು, ಹೋರಾಟಗಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದೆ.

ತಾವು ಕೈಗೊಂಡ ಕ್ರಮಗಳ ಕುರಿತು ಕೇಂದ್ರ ಸರಕಾರಕ್ಕೆ ನೀಡಿರುವ ಮಾಹಿತಿ ಕುರಿತು ಬ್ಲಾಗ್ ಒಂದರಲ್ಲಿ ಟ್ವಿಟರ್ ಜಗತ್ತಿನಾದ್ಯಂತ ಮುಕ್ತ ಅಂತರ್ಜಾಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಹೇಳಿದೆ.

“ನಾವು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸರಕಾರ ನೀಡಿದ ಸೂಚನೆ ಭಾರತರ ಕಾನೂನಿನಡಿ ಪೂರಕವಾಗಿಲ್ಲದ ಕಾರಣ ಹಾಗೂ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ನಾವು ಸುದ್ದಿ ತಾಣಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ರಾಜಕಾರಣಿಗಳ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೇನಾದರೂ ಕೈಗೊಂಡಲ್ಲಿ ಅದು ಭಾರತೀಯ ಕಾನೂನಿನಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ” ಎಂದು ಟ್ವಿಟರ್ ಹೇಳಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಐಟಿ ಕಾಯ್ದೆಯನ್ವಯ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲು ಹಲವು ಆದೇಶಗಳನ್ನು ಜಾರಿಗೊಳಿಸಿತ್ತು. ತುರ್ತಾಗಿ ಬ್ಲಾಕ್ ಮಾಡುವಂತೆ ದೊರೆತ ಎರಡು ಆದೇಶಗಳನ್ನು ನಾವು ತಾತ್ಕಾಲಿಕವಾಗಿ ಪಾಲಿಸಿದರೂ ನಂತರ ಅವುಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದೇವೆ. ಇದನ್ನು ಸಚಿವಾಲಯಕ್ಕೆ ತಿಳಿಸಿದ ನಂತರ ಆದೇಶ ಪಾಲನೆಯಾಗಿಲ್ಲದ ಕುರಿತು ನೋಟಿಸ್ ಜಾರಿಯಾಯಿತು ಎಂದು ಟ್ವಿಟರ್ ಹೇಳಿದೆ.

Join Whatsapp
Exit mobile version