Home ಜಾಲತಾಣದಿಂದ ಟರ್ಕಿ ಭೂಕಂಪ| ಕಾಣೆಯಾಗಿದ್ದ ಬೆಂಗಳೂರಿನ ಟೆಕ್ಕಿ ಮೃತದೇಹ ಪತ್ತೆ

ಟರ್ಕಿ ಭೂಕಂಪ| ಕಾಣೆಯಾಗಿದ್ದ ಬೆಂಗಳೂರಿನ ಟೆಕ್ಕಿ ಮೃತದೇಹ ಪತ್ತೆ

ಬೆಂಗಳೂರು: ಟರ್ಕಿಯಲ್ಲಿ ಉಂಟಾದ ಭೂಕಂಪದಲ್ಲಿ ಓರ್ವ ಬೆಂಗಳೂರಿನ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ವರದಿಯಾಗಿತ್ತು. ಇದೀಗ ಆ ವ್ಯಕ್ತಿಯ ಶವ ಪತ್ತೆಯಾಗಿದೆ.

ಬೆಂಗಳೂರಿನ ನಿವಾಸಿ, ಟೆಕ್ಕಿ ವಿಜಯ್​ ಕುಮಾರ್ ಭೂಕಂಪದಲ್ಲಿ ಸಿಲುಕಿ ನಾಪತ್ತೆಯಾಗಿದ್ದರು.

ವಿಜಯ್​ ಕುಮಾರ್ ಟರ್ಕಿಯ ಮಾಲತ್ಯ ನಗರದ ಹೋಟೆಲ್​ನ 24 ಅಂತಸ್ತಿನ ಹೋಟೆಲ್​ನ 2ನೇ ಮಹಡಿಯಲ್ಲಿ ತಂಗಿದ್ದರು. ಭೂಕಂಪನದ ನಂತರ ಹೋಟೆಲ್​ ಸಂಪೂರ್ಣ ಕುಸಿದಿತ್ತು. ವಿಜಯ್​ ಕುಮಾರ್ ಫೆಬ್ರವರಿ 6ರಿಂದ ನಾಪತ್ತೆಯಾಗಿದ್ದರು. ಶನಿವಾರ (ಫೆ.11) ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಬೆಳಿಗ್ಗೆ ಟೆಕ್ಕಿಯ ಪಾಸ್‌ಪೋರ್ಟ್ ಹಾಗೂ ಇತರೆ ವಸ್ತುಗಳು ಪತ್ತೆಯಾಗಿದ್ದವು. ಈಗ ವಿಜಯ ಕುಮಾರ್​ ಶವ ಪತ್ತೆಯಾಗಿದೆ ಎಂದು ಟರ್ಕಿಯ ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.

ಕೈಯಲ್ಲಿದ್ದ ಟ್ಯಾಟೊ ಮೂಲಕ ಮೃತದೇಹ ಪತ್ತೆ

ಉತ್ತರಾಖಂಡ್‌ನಲ್ಲಿರುವ ಕುಟುಂಬ ಸದಸ್ಯರು ವಿಜಯ ಕುಮಾರ್​ನನ್ನು ಗುರುತಿಸಲು ಟೆಕ್ಕಿಯ ಎಡಗೈಯಲ್ಲಿದ್ದ ಟ್ಯಾಟೋ ಫೋಟೋ ಕಳುಹಿಸಿದ್ದರು. ಈ ಗುರುತಿನ ಮೂಲಕ ವಿಜಯ ಕುಮಾರ್ ಪತ್ತೆಯಾಗಿದ್ದಾರೆ. ದುರಾದೃಷ್ಟವಶಾತ್​ ಅವರು ಮೃತಪಟ್ಟಿದ್ದಾರೆ. ವಿಜಯ್ ಕುಮಾರ್​ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.

Join Whatsapp
Exit mobile version