ಟ್ರಂಪ್ ತೆರಿಗೆ | ಭಾರತೀಯ ಷೇರುಮಾರುಕಟ್ಟೆಯಲ್ಲಿ ‘ರಕ್ತಪಾತ’; ಸೆನ್ಸೆಕ್ಸ್ 4,000 ಅಂಕ ಕುಸಿತ

- Advertisement -

- Advertisement -

ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರೆಯ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಘೋಷಣೆಯಿಂದಾಗಿ ಸೋಮವಾರ ಷೇರು ಮಾರುಕಟ್ಟೆಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲೆಡೆ ಕುಸಿತ ಕಂಡುಬಂದಿದೆ. ಇಲ್ಲಿಯವರೆಗೆ ಅಲ್ಪ ಕುಸಿತಗಳನ್ನು ಕಂಡಿದ್ದ ಹೂಡಿಕೆದಾರರು ಸೋಮವಾರದ ಷೇರುಪೇಟೆ ಪತನ ಕಂಡು ದಿಗ್ಭ್ರಾಂತರಾಗಿದ್ದಾರೆ.

ಬಿಎಸ್‌ಇ ಸೆನ್ಸೆಕ್ಸ್‌ 4000 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದರೆ, 1,160 ಅಂಕಗಳಷ್ಟು ನಷ್ಟದೊಂದಿಗೆ ದಿನದ ವಹಿವಾಟು ಶುರು ಮಾಡಿದೆ. ಈ ಮೂಲಕ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

- Advertisement -

ವಾರಾಂತ್ಯದ ರಜಾದಿನಗಳ ನಂತರ ಸೋಮವಾರ ಬೆಳಿಗ್ಗೆ 9 ಗಂಟೆಗೆ ವಹಿವಾಟು ಪುನರಾರಂಭವಾದಾಗ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 3, 939.68 ಅಂಕ ಕುಸಿತ ಕಂಡು 71,425.01ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ನಿಫ್ಟಿ 50ಯು 1,160.8 ಅಂಕಗಳ ಕುಸಿತದೊಂದಿಗೆ 21,743.65ಕ್ಕೆ ತಲುಪಿತು.

ಸದ್ಯ 9.54ರ ವೇಳೆಗೆ ಸೆನ್ಸೆಕ್ಸ್‌ 2,657.71 ಅಂಕ ಅಥವಾ ಶೇ. 3.53ರಷ್ಟು ಕುಸಿತ ಕಂಡಿದ್ದು, 72,706.98ರಲ್ಲಿ ವಹಿವಾಟು ಮುಂದುವರಿಸಿದೆ.ನಿಫ್ಟಿ 50ಯು 872.55 ಅಂಕ ಅಥವಾ ಶೇ. 3.81ರಷ್ಟು ಇಳಿಕೆ ಕಂಡು 22,031.90ರಲ್ಲಿ ವಹಿವಾಟು ನಡೆಸುತ್ತಿದೆ.

ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2ರಂದು ಮಾಡಿದ ಘೋಷಣೆಗಳ ಬಳಿಕ ಸ್ವತಃ ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ಮಾರುಕಟ್ಟೆಗಳು ತೀವ್ರ ನಷ್ಟ ಅನುಭವಿಸಿದ್ದವು. ಇದೀಗ ಸೋಮವಾರವೂ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ. ಶುಕ್ರವಾರವೂ ಅಮೆರಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ನಾಸ್ಡಾಕ್ ಕಾಂಪೊಸಿಟ್ ಸೂಚ್ಯಂಕವು 962 ಅಂಶ (ಶೇ.5.82) ಕುಸಿದು 15,587ಕ್ಕೆ ಇಳಿದರೆ, ಎಸ್ಆ್ಯಂಡ್‌ಪಿ ಸೂಚ್ಯಂಕವು 322 ಅಂಶ ಕುಸಿತ ದಾಖಲಿಸಿ, 5074ರಲ್ಲಿ ಕೊನೆಗೊಂಡಿತ್ತು.

ಮಾರುಕಟ್ಟೆಯ ವಹಿವಾಟು ಮುಂದುವರಿದಿದ್ದು, ಕುಸಿತವೂ ಮುಂದುವರಿದಿದೆ. ಸಾಯಂಕಾಲ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ ಎಷ್ಟರ ಮಟ್ಟಕ್ಕೆ ಕುಸಿತವಾಗಲಿದೆ ಅಥವಾ ನಡುವೆ ಚೇತರಿಕೆ ಕಂಡುಬರಬಹುದೇ ಎಂಬುದು ಹೂಡಿಕೆದಾರರ ಕುತೂಹಲ.

- Advertisement -


Must Read

Related Articles