ಹೈದರಾಬಾದ್ : ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಶಾಸಕ ಚಲ್ಲಾ ಧರ್ಮ ರೆಡ್ಡಿ ನಿವಾಸದ ಮೇಲೆ ಭಾನುವಾರ ಸಂಜೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ 39 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದ ಇನ್ನೂ 14 ಮಂದಿ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ನಾಯಕರು ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಯಾವುದೇ ಖಾತೆಗಳನ್ನು ತೋರಿಸದೆ ಭಾರೀ ಹಣವನ್ನು ಸಂಗ್ರಹಿಸಿ ವಂಚಿಸುತ್ತಿದ್ದಾರೆ ಎಂದು ಶಾಸಕ ಚಲ್ಲಾ ಧರ್ಮ ರೆಡ್ಡಿ ಆರೋಪಿಸಿದ್ದರು. ಇದನ್ನು ವಿರೋಧಿಸಿ ಪಕ್ಷದ ವಾರಂಗಲ್ ಜಿಲ್ಲಾ ಘಟಕದ ಅಧ್ಯಕ್ಷ ರಾವ್ ಪದ್ಮಾ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕರ ನಿವಾಸದ ಮೇಲೆ ದಾಳಿ ನಡೆಸಿದ್ದರು.
ಮನೆ ಮೇಲೆ ಕಲ್ಲೆಸೆಯಲಾಗಿತ್ತು. ಮನೆಯ ಕಿಟಕಿ ಗಾಜು, ಹೂವಿನ ಕುಂಡಗಳು ಸೆರಿದಂತೆ ಇತರ ಆಸ್ತಿಪಾಸ್ತಿಗಳನ್ನು ನಾಶಪಡಿಸಲಾಗಿದೆ. ಪೊಲೀಸರ ಭದ್ರತೆಯ ನಡುವೆಯೂ ಬಿಜೆಪಿ ಕಾರ್ಯಕರ್ತರು ದಾಂಧಲೆ ನಡೆಸಿದ್ದರು.