Home ಟಾಪ್ ಸುದ್ದಿಗಳು ಕೋಮು ಪ್ರಚೋದನಕಾರಿ ಪೋಸ್ಟ್: 68 ಟ್ವಿಟ್ಟರ್ ಖಾತೆಗಳ ಸ್ಥಗಿತಕ್ಕೆ ತ್ರಿಪುರಾ ಪೊಲೀಸರ ಸೂಚನೆ

ಕೋಮು ಪ್ರಚೋದನಕಾರಿ ಪೋಸ್ಟ್: 68 ಟ್ವಿಟ್ಟರ್ ಖಾತೆಗಳ ಸ್ಥಗಿತಕ್ಕೆ ತ್ರಿಪುರಾ ಪೊಲೀಸರ ಸೂಚನೆ

ಅಗರ್ತಲಾ: ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ನಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್ ಗಳನ್ನು ಹರಿಯ ಬಿಡಲಾಗಿದೆ ಎಂದು ಆರೋಪಿಸಿ 68 ಖಾತೆಗಳನ್ನು ಸ್ಥಗಿತಗೊಳಿಸುವಂತೆ ತ್ರಿಪುರಾ ಪೊಲೀಸರು ಟ್ವಿಟ್ಟರ್ ಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಲು ಟ್ವಿಟ್ಟರ್ ಖಾತೆಗಳನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ 68 ಖಾತೆಗಳ ಮೇಲೆ ಯುಎಪಿಎ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪಶ್ಚಿಮ ತ್ರಿಪುರಾ ಜಿಲ್ಲೆಯ ಪೊಲೀಸರು 68 ಖಾತೆಗಳ ಲಿಂಕ್ ಅನ್ನು ಉಲ್ಲೇಖಿಸಿ ಅಮೆರಿಕದ ಕ್ಯಾಲಿಫೋರ್ನಿಯಾ ಕಚೇರಿಗೆ ನವೆಂಬರ್ 3 ರಂದು ಪತ್ರ ಬರೆದಿದ್ದಾರೆ ಎಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಸಕ್ತ ಟ್ವಿಟ್ಟರ್ ಖಾತೆಗಳಲ್ಲಿ ಕಪೋಕಲ್ಪಿತ ಸುಳ್ಳು ಸುದ್ದಿ, ವೀಡಿಯೋಗಳನ್ನು ಪ್ರಚಾರಪಡಿಸಿ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದೆ.

ಸದ್ಯ ತ್ರಿಪುರಾದಲ್ಲಿ ನಡೆದ ಗಲಭೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ 15 ದಾಳಿಗಳು ನಡೆದಿದೆ ಎಂದು ಜಮೀಯತ್ ಉಲಮಾ ತ್ರಿಪುರಾ ಘಟಕದ ಅಧ್ಯಕ್ಷ ಮುಫ್ತಿ ತೈಬುರ್ ರೆಹ್ಮಾನ್ ಮಾಧ್ಯಮಕ್ಕೆ ತಿಳಿಸಿದೆ.

Join Whatsapp
Exit mobile version