ಮಂಗಳೂರು: ಫರಂಗಿಪೇಟೆ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ಇಂದಿಗೆ 12 ದಿನ ಕಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಂತ್ ಮಂಗಳಮುಖಿಯರ ಜೊತೆ ಹೋಗಿದ್ದಾನೆ ಎಂದು ವಂದತಿಯೊಂದು ಹಬ್ಬಿದೆ.
ಈ ಬಗ್ಗೆ ಮಾತನಾಡಿದ ದಿಗಂತ್ ಸಹೋದರ ಪವನ್ , ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿ ಹರಡುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡದ ಎಸ್ ಐ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ಮಾಹಿತಿ ಇದೆಯಾ ಎಂದು ವಿಚಾರಿಸಿದೆ. ಅವರು ನಮಗೆ ಈ ರೀತಿಯ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಜನ ಆ ರೀತಿ ಹೇಳುತ್ತಿದ್ದಾರೆ ಅಂದ್ರು. ಅದು ಸುಳ್ಳು ಸುದ್ದಿಯಾಗಿರಬಹುದು. ಈವರೆಗೂ ಆತನ ವರ್ತನೆಯಲ್ಲಿ ಈ ರೀತಿಯ ಬದಲಾವಣೆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.
ಸ್ನೇಹಿತರ ಜೊತೆ ಮೆಸೇಜ್ ಮಾಡುತ್ತಿದ್ದನು. ತಡರಾತ್ರಿವರೆಗೂ ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಿದ್ದನಂತೆ. ಅವನು ಬೇರೆ ಬೇರೆ ಮೊಬೈಲ್ ನ್ನೂ ಉಪಯೋಗಿಸುತ್ತಿದ್ದನು ಎಂದು ಪೊಲೀಸರು ಹೇಳಿದ ಬಳಿಕವಷ್ಟೇ ನನಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಫರಂಗಿಪೇಟೆಯಲ್ಲಿ ಸಿಸಿ ಕ್ಯಾಮರಾ ತುಂಬಾ ಕಡಿಮೆಯಿವೆ. ನಾಪತ್ತೆಯಾಗಿ 48 ಗಂಟೆ ಬಳಿಕ ಶ್ವಾನದಳ ಬಂದಿತ್ತು. ಆದರೆ, 6 ಗಂಟೆ ಬಳಿಕ ಶ್ವಾನಕ್ಕೆ ವಾಸನೆ ಗ್ರಹಿಸುವುದು ಸಾಧ್ಯವಾಗಲ್ಲ. ಶ್ವಾನ ಬಂದರೂ ಸಹ ಏನು ಪ್ರಯೋಜನ ಇಲ್ಲದಂತಾಗಿದೆ. 24 ಗಂಟೆ ಒಳಗೆ ಹುಡುಕಾಟ ಆರಂಭಿಸಿದ್ದರೇ ಏನಾದರೂ ಒಳ್ಳೆ ಸುದ್ದಿ ಸಿಗುತ್ತಿತ್ತು ಎಂದರು.
ನಾಪತ್ತೆ ಸ್ಥಳದಲ್ಲಿ ಕೂಂಬಿಂಗ್ ಕಾರ್ಯ
ವಿವಿಧ ಆಯಾಮಗಳಲ್ಲಿ 40 ಕ್ಕೂ ಅಧಿಕ ಪೊಲೀಸರ ತಂಡ ಕೆಲಸ ಮಾಡಿದೆಯಾದರೂ ದಿಗಂತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಕೂಂಬಿಂಗ್ ಕಾರ್ಯ ಆರಂಭಿಸಿದ್ದಾರೆ.
ಬಂಟ್ವಾಳ ಸಬ್ ಡಿವಿಜನ್ ನ ಸುಮಾರು 9 ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗಳು ಎಸ್.ಐ.ಗಳು ಹಾಗೂ ಸುಮಾರು 100ಕ್ಕೂ ಅಧಿಕ ಪೊಲೀಸರ ತಂಡ ಬೆಳಿಗ್ಗೆನಿಂದಲೇ ಕೂಂಬಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದೆ.
ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮರಾಗಳನ್ನು ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ.ನ ಭಾಗದಲ್ಲಿ ಹುಡುಕಾಟ ಮಾಡಲು ಯೋಜನೆ ತಯಾರಿಸಿ ಕಾರ್ಯ ಆರಂಭಿಸಿದೆ. ನೇತ್ರಾವತಿ ನದಿ ಭಾಗದ ಸುತ್ತಲಿನ ಭಾಗದಲ್ಲಿ ದೋಣಿ ಬಳಸಿಕೊಂಡು ನದಿಯಲ್ಲಿ ಕೂಡ ಹುಡುಕಲಾಗುತ್ತಿದೆ.
