Home ಟಾಪ್ ಸುದ್ದಿಗಳು ಸಂಚಾರ ನಿಯಮ ಉಲ್ಲಂಘನೆ; ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಗೆ ದಂಡ

ಸಂಚಾರ ನಿಯಮ ಉಲ್ಲಂಘನೆ; ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಗೆ ದಂಡ

ಬೆಂಗಳೂರು: ಅತೀ ವೇಗ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಕಾರು ತಡೆದ ಸಂಚಾರ ಪೊಲೀಸರ ಜತೆ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ವಾಗ್ವಾದ ನಡೆಸಿರುವ ಘಟನೆ ರಾಜಭವನ ರಸ್ತೆಯಲ್ಲಿ  ನಡೆದಿದೆ. ಈ ಸಂಬಂಧ ವಿಡಿಯೋ ವೈರಲ್‌ ಆಗಿದೆ.

ಕಾನೂನು ಮತ್ತು ಸುವ್ಯವಸ್ಥೆಯ ಎಸಿಪಿಯೊಬ್ಬರು ಕ್ವೀನ್ಸ್‌ ರಸ್ತೆಯಲ್ಲಿ ತಮ್ಮ ವಾಹನದಲ್ಲಿ ಹೋಗುತ್ತಿದ್ದ ವೇಳೆ ಶಾಸಕರ ಪುತ್ರಿ ಅತೀ ವೇಗವಾಗಿ ಐಷಾರಾಮಿ ಬಿಎಂಡಬ್ಲ್ಯೂ ಕಾರು ಚಾಲಾಯಿಸಿಕೊಂಡು ಸ್ನೇಹಿತರ ಜತೆ ರಾಜಭವನ ರಸ್ತೆ ಕಡೆ ಹೋಗುತ್ತಿದ್ದರು.

ಅದನ್ನು ಗಮನಿಸಿದ ಎಸಿಪಿ ಕೂಡಲೇ ಕಂಟ್ರೋಲ್‌ ರೂಂಗೆ ಕಾರಿನ ನಂಬರ್‌ ಸಮೇತ ದೂರು ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಪೊಲೀಸರು ರಾಜಭವನ ರಸ್ತೆಯಲ್ಲಿ ಕಾರನ್ನು ತಡೆದಿದ್ದಾರೆ. ಆಕ್ರೋಶಗೊಂಡ ಶಾಸಕರ ಪುತ್ರಿ “ನಾನು ಯಾರು ಗೊತ್ತಾ?. ನಾನು ಮಾಜಿ ಸಚಿವ, ಹಾಲಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ. ಕಾರನ್ನು ತಡೆದಿದ್ದು ಏಕೆ ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ.

ಪೊಲೀಸರು ಕಾರಿನ ನಂಬರ್‌ ಪರಿಶೀಲಿಸಿದಾಗ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಹಳೆಯ 9 ಸಾವಿರ ರೂ. ಬಾಕಿಯಿರುವುದು ಗೊತ್ತಾಗಿದೆ. ಅತೀ ವೇಗವಾಗಿ ಕಾರು ಚಾಲನೆ ಮಾಡಿದ್ದಲ್ಲದೆ, ಹಿಂದಿನ ದಂಡ ಬಾಕಿ ಇದೆ ಎಂದುಒಟ್ಟು 10 ಸಾವಿರ ರೂ. ದಂಡ ಕಟ್ಟುವಂತೆ ಸೂಚಿಸಿದ್ದಾರೆ. 10 ಸಾವಿರ ರೂ. ದಂಡ ಕಟ್ಟಿದ ಬಳಿಕ ಕಾರು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿದ  ಶಾಸಕ ಅರವಿಂದ್‌ ಲಿಂಬಾವಳಿ, ನನ್ನ ಮಗಳು ತನ್ನ ಸ್ನೇಹಿತರ ಜೊತೆ ಹೋಗುತ್ತಿದ್ದಾಗ ಪೋಲಿಸರು ತಡೆದಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಇರುವ ಕಾರಣ  ಪೋಲಿಸರು ಬಂದೋಬಸ್ತ್ ಮಾಡಿದ್ದರು.  ಮಾಧ್ಯಮಗಳ ಬಗ್ಗೆ ಏನನ್ನೂ ಅವಳು ಮಾತನಾಡಿಲ್ಲ, ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಡ್ರೈವ್‌ ಮಾಡಬೇಕಾದರೆ ಓವರ್‌ ಸ್ಪೀಡ್‌ ಮಾಡಿದ್ದಾರೆ ಅಂತ ದಂಡ ಕಟ್ಟಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದ್ದಾರೆ.

Join Whatsapp
Exit mobile version