ಮುಜಾಫರ್ ನಗರ: ಉತ್ತರ ಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಫೆಬ್ರವರಿ 21ರಂದು ಟ್ರಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಘೋಷಿಸಿದೆ.
ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಮತ್ತು ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಅವರ ಬೇಡಿಕೆಗಳನ್ನು ಬೆಂಬಲಿಸಿ ರೈತರು ಫೆಬ್ರವರಿ 26 ಮತ್ತು 27 ರಂದು ದೆಹಲಿಗೆ ಹೋಗುವ ಹೆದ್ದಾರಿಗಳಲ್ಲಿ ತಮ್ಮ ಟ್ರಾಕ್ಟರುಗಳನ್ನು ನಿಲ್ಲಿಸಲಿದ್ದಾರೆ.
ಮುಜಾಫರ್ ನಗರದ ಸಿಸೌಲಿಯಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಮಹಾಪಂಚಾಯತ್ ಅನ್ನುದ್ದೇಶಿಸಿ ಮಾತನಾಡಿದ ಬಿಕೆಯು ನಾಯಕ ರಾಕೇಶ್ ಟಿಕಾಯತ್, ಫೆಬ್ರವರಿ 21 ರಂದು ನಡೆಯಲಿರುವ ಟ್ರಾಕ್ಟರ್ ಮೆರವಣಿಗೆಯಲ್ಲಿ ತಮ್ಮ ಸಂಪೂರ್ಣ ಶಕ್ತಿಯನ್ನು ತೋರಿಸುವಂತೆ ರೈತರಿಗೆ ಮನವಿ ಮಾಡಿದ್ದಾರೆ.
ರೈತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ದಾಳಿ ನಡೆಸಿದರು ಮತ್ತು ಇದು ಉತ್ಪಾದನೆ ಮತ್ತು ಬೆಳೆ ರಕ್ಷಿಸುವ ಯುದ್ಧವಾಗಿದೆ ಎಂದು ಹೇಳಿದ್ದಾರೆ