ಟೋಕಿಯೋ, ಆ.4: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾಬಾಯಿ ಚಾನು, ಪಿವಿ.ಸಿಂಧೂ ಬಳಿಕ ಬಾಕ್ಸರ್ ಲವ್ಲಿನಾ ಬರ್ಗಹೈನ್ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ ಬಾಕ್ಸಿಂಗ್ನಲ್ಲಿ ಭಾರತದ ಲವ್ಲಿನಾ ಬರ್ಗಹೈನ್ ಟೋಕಿಯೋದಲ್ಲಿ ಕಂಚಿನ ಪದಕಕ್ಕೆ ಕೊರೆಳೊಡ್ಡಿದ್ದಾರೆ.
ಮಹಿಳೆಯರ ವೆಲ್ಟರ್ವೈಟ್ (64-69 ಕೆಜಿ ವಿಭಾಗ)ದ ಬಾಕ್ಸಿಂಗ್ ಸೆಮಿ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬರ್ಗಹೈನ್ ಟರ್ಕಿಯ ಬುಸೆನಝ್ ಸುರ್ಮೆನೆಲಿ ವಿರುದ್ಧ 5-0 ಅಂತರದಲ್ಲಿ ಏಕಪಕ್ಷೀಯವಾಗಿ ಸೋಲುವ ಮೂಲಕ ಫೈನಲ್ ಸ್ಪರ್ಧೆಯಿಂದ ಹೊರನಡೆದಿದ್ದಾರೆ. ಆದರೂ ಬಾಕ್ಸಿಂಗ್ ನಿಯಮದ ಪ್ರಕಾರ ಸೆಮಿಫೈನಲ್ ನಲ್ಲಿ ಸೋತರೂ ಲವ್ಲಿನಾಗೆ ಕಂಚಿನ ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.
ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬಾಕ್ಸಿಂಗ್ ವಿಭಾಗದಲ್ಲಿ ಮೂರನೇ ಪದಕ ಲಭಿಸಿದಂತಾಗಿದೆ. ಇದಕ್ಕೂ ಮೊದಲು ವಿಜೇಂದರ್ ಸಿಂಗ್ ಹಾಗೂ ಮೇರಿ ಕೋಮ್ ಬಾಕ್ಸಿಂಗ್ನಲ್ಲಿ ಪದಕ ಗೆದ್ದಿದ್ದರು.
ಕ್ವಾರ್ಟರ್ ಫೈನಲ್ನಲ್ಲಿ ಲವ್ಲಿನಾ ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದರು.