ಮುಜಫ್ಫರ್ ನಗರ (ಉತ್ತರ ಪ್ರದೇಶ): ಮುಜಫ್ಫರ್ ನಗರದಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯ ಭಾವಚಿತ್ರದೊಂದಿಗೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಸ್ವಾತಂತ್ರ್ಯ ದಿನದಂದೆ ತಿರಂಗಾ ಯಾತ್ರೆ ನಡೆಸಿದ್ದು, ಈ ಕುರಿತ ವೀಡಿಯೊ ವೈರಲ್ ಆಗಿದೆ. ಹಿಂದೂ ಸಭಾದ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತೀಯ ಹಿಂದೂ ಮಹಾಸಭಾವು ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ತಿರಂಗಾ ಯಾತ್ರೆಯನ್ನು ನಡೆಸಿದೆ. ಅದರಲ್ಲಿ ಅವರು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯ ಚಿತ್ರವನ್ನು ಹಾಕಿದ್ದರು.
ಅಲ್ಲದೆ ಯಾತ್ರೆಯಲ್ಲಿ ‘ಗೋಡ್ಸೆ ನಮ್ಮ ಸ್ಫೂರ್ತಿ’. ಗೋಡ್ಸೆ ಗಾಂಧಿಯವರ ಕೆಲವು ನೀತಿಗಳಿಂದಾಗಿ ಗಾಂಧಿಯನ್ನು ಕೊಂದನು. ಗಾಂಧಿಯ ನೀತಿಗಳಿಂದಾಗಿ, ದೇಶವನ್ನು ವಿಭಜಿಸಲಾಯಿತು ಮತ್ತು 30 ಲಕ್ಷ ಹಿಂದೂಗಳು ಮತ್ತು ಮುಸ್ಲಿಮರು ಸತ್ತರು, ಇದಕ್ಕೆ ಗಾಂಧಿಯೇ ಜವಾಬ್ದಾರರಾಗಿದ್ದರು ಎಂದು ಗಾಂಧಿಯ ಕುರಿತು ಹಿಂದೂ ಮಹಾಸಭಾದ ನಾಯಕ ಯೋಗೇಂದ್ರ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯವೆಸಗಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.