Home ಟಾಪ್ ಸುದ್ದಿಗಳು ಅದಾನಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ಸದಸ್ಯರಿಂದ ದೆಹಲಿಯಲ್ಲಿ ತಿರಂಗ ಮಾರ್ಚ್

ಅದಾನಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ಸದಸ್ಯರಿಂದ ದೆಹಲಿಯಲ್ಲಿ ತಿರಂಗ ಮಾರ್ಚ್

ನವದೆಹಲಿ: ಡಿಎಂಕೆ, ಎಸ್ ಪಿ, ಆರ್ ಜೆಡಿ, ಶಿವಸೇನೆ ಉದ್ಧವ್, ಎಎಪಿ, ಎನ್ ಸಿಪಿ ಮೊದಲಾದ ಸಮಾನ ಮನಸ್ಕ ಪಕ್ಷಗಳ ಸಂಸದರು ದಿಲ್ಲಿಯಲ್ಲಿ ಅದಾನಿ ಅವ್ಯವಹಾರ ತನಿಖೆಗೆ ಒತ್ತಾಯಿಸಿ ತಿರಂಗ ಮಾರ್ಚ್ ನಡೆಸಿದರು. ಎಡ ಪಕ್ಷಗಳವರು ಮತ್ತು ಕಾಂಗ್ರೆಸ್ ನವರೂ ಅದರಲ್ಲಿ ಸೇರಿಕೊಂಡರು.


ಲೋಕ ಸಭೆ, ರಾಜ್ಯ ಸಭೆಗಳೆರಡೂ ಮುಂದೂಡಲ್ಪಟ್ಟ ಕಾರಣ ಹೊರಬಂದ ವಿರೋಧ ಪಕ್ಷಗಳ ಸಂಸದರು ಅದಾನಿ ಅವ್ಯವಹಾರ ತನಿಖೆಗೆ ಒತ್ತಾಯಿಸಿ ಪಾರ್ಲಿಮೆಂಟ್ ಹೌಸ್ ನಿಂದ ವಿಜಯ ಚೌಕ್ ವರೆಗೆ ತ್ರಿವರ್ಣ ಧ್ವಜ ಜಾಥಾ ನಡೆಸಿದರು. ಸಂಸತ್ತಿನಲ್ಲಿ ಜಂಟಿ ಸಂಸದೀಯ ಸಮಿತಿ ರಚನೆಗೆ ಪ್ರತಿ ಪಕ್ಷಗಳು ಒತ್ತಾಯಿಸಿದಾಗ ಎರಡೂ ಸದನ ಮುಂದೂಡಲಾದುದರಿಂದ ಅವರು ಈ ಜಾಥಾ ಹೋರಾಟವನ್ನು ನಡೆಸಿದರು.


ದ್ರಾವಿಡ ಮುನ್ನೇತ್ರ ಕಳಗಂ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಶಿವಸೇನೆ (ಯುಬಿಟಿ), ಆಮ್ ಆದ್ಮಿ ಪಕ್ಷ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಗಳ ಸಂಸದರು ಎಡ ಪಕ್ಷಗಳ ಮತ್ತು ಕಾಂಗ್ರೆಸ್ಸಿನವರ ಜೊತೆ ಸೇರಿ ಈ ಮಾರ್ಚ್ ಮಾಡಿದರು. ಸಂಸತ್ತಿನ 1ನೇ ಗೇಟಿನಿಂದ ರಾಷ್ಟ್ರ ಧ್ವಜ ಎತ್ತಿ ಹಿಡಿದು ನಡೆದರು.
ಸಂಸತ್ ಭವನದ ಗೇಟ್ 1ರಲ್ಲಿ ಸೋನಿಯಾ ಗಾಂಧಿಯವರೂ ದೇಶ ಬಾವುಟ ಎತ್ತಿ ನಿಂತರು. ಪ್ರತಿಪಕ್ಷಗಳ ಸಂಸದರ ನಾಯಕತ್ವವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಹಿಸಿಕೊಂಡರು.
“ಸರಕಾರವು ಲೋಕ ಸಭೆ ಕಲಾಪ ನಡೆಯಲೇ ಬಿಡುತ್ತಿಲ್ಲ. ಅವರು ಅದಾನಿ ಅವ್ಯವಹಾರದ ಬಗ್ಗೆ ಯಾಕೆ ಚರ್ಚಿಸಲು ಸಿದ್ಧರಿಲ್ಲ?” ಎಂದು ಕಾಂಗ್ರೆಸ್ಸಿನ ಕೆ. ಸಿ. ವೇಣುಗೋಪಾಲ್ ಕೇಳಿದರು.
“ಮೋದಿ ಸರಕಾರವು ಪ್ರಜಾಪ್ರಭುತ್ವದ ಬಗ್ಗೆ ತುಂಬ ಮಾತನಾಡುತ್ತದೆ. ಆದರೆ ಅದರಂತೆ ನಡೆದುಕೊಳ್ಳುವುದಿಲ್ಲ” ಎಂದು ಖರ್ಗೆ ಹೇಳಿದರು.


“ಯಾವುದೇ ಚರ್ಚೆ ಇಲ್ಲದೆ 12 ನಿಮಿಷದಲ್ಲಿ 50 ಲಕ್ಷ ಕೋಟಿಯ ಬಜೆಟ್ ಪಾಸಾಗುತ್ತದೆಂದರೆ ಏನರ್ಥ?” ಎಂದು ಖರ್ಗೆ ಪ್ರಶ್ನಿಸಿದರು.
ರಾಹುಲ್ ಗಾಂಧಿಯವರ ಲಂಡನ್ ಭಾಷಣ ಪ್ರಸ್ತಾಪಿಸಿ ಬಿಜೆಪಿಯು ಜನರ ಗಮನವನ್ನು ಅದಾನಿ ವಿಷಯದಿಂದ ಬೇರೆ ಕಡೆಗೆ ಸೆಳೆಯುತ್ತಿದೆ ಎಂದು ರಾಜ್ಯ ಸಭಾ ಸದಸ್ಯರು ದೂರಿದರು.
ಇಷ್ಟೆಲ್ಲ ವರದಿ, ಹಿಂಡೆನ್ ಬರ್ಗ್ ವರದಿ ಇದ್ದರೂ ಜಂಟಿ ಸಂಸದೀಯ ಸಮಿತಿ ರಚಿಸಲು ಮೋದಿ ಸರಕಾರ ಹೆದರುತ್ತಿರುವುದೇಕೆ ಎಂದು ಪ್ರತಿಭಟನಾಕಾರರು ಕೇಳಿದರು.

Join Whatsapp
Exit mobile version