ಬೆಂಗಳೂರು: ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಂ ದ್ವೇಷ ಸಾಧಿಸುವುದೇ ಅದರ ಮೂಲ ಕಾರ್ಯವಾಗಿದೆ. ಮುಸ್ಲಿಮರ ಹೆಸರಿನಲ್ಲಿರುವ ಯೋಜನೆಗಳು, ರೈಲುಗಳು, ರಸ್ತೆಗಳು ಮತ್ತು ನಗರಗಳ ಹೆಸರುಗಳನ್ನು ಬದಲಾಯಿಸುವ ಮೂಲಕ ಅದು ನೈಜ ಇತಿಹಾಸವನ್ನು ಮರೆಮಾಚಬಹುದು ಎಂಬ ಭ್ರಮೆಯಲ್ಲಿದೆ. ಅದರ ಭಾಗವಾಗಿ ಟಿಪ್ಪು ಎಕ್ಸ್’ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿ ಒಡೆಯರ್ ಎಕ್ಸ್’ಪ್ರೆಸ್ ಎಂದು ಮಾಡಲಾಗಿದೆ. ಇದು ಮುಸ್ಲಿಂ ದ್ವೇಷವಲ್ಲದೆ ಮತ್ತೇನು ಅಲ್ಲ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಡೆಯರ್ ಅವರ ಬಗ್ಗೆ ನಮಗೆ ಗೌರವ ಇದೆ. ಹೊಸ ರೈಲು ಮಾರ್ಗ ನಿರ್ಮಾಣ ಮಾಡಿ ಅದಕ್ಕೆ ಒಡೆಯರ್ ಅವರ ಹೆಸರನ್ನು ಇಟ್ಟಿದ್ದರೆ ಅಭಿವೃದ್ಧಿ ಕಾರ್ಯವೂ ಆಗುತ್ತಿತ್ತು. ಜೊತೆಗೆ ಒಡೆಯರ್ ಅವರಿಗೆ ಗೌರವ ಸಲ್ಲಿಸಿದಂತೆಯೂ ಆಗುತ್ತಿತ್ತು. ಅದನ್ನು ಬಿಟ್ಟು ಕೇವಲ ಟಿಪ್ಪು ಹೆಸರು ತೆಗೆದು ಒಡೆಯರ್ ಅವರ ಹೆಸರನ್ನು ಇಡುವ ಮೂಲಕ ಈ ಕೋಮುವಾದಿ ಸರ್ಕಾರ ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುವ ಮತ್ತು ತಮ್ಮ ಹಿಡನ್ ಅಜೆಂಡಾವಾದ ಮುಸ್ಲಿಂ ದ್ವೇಷವನ್ನು ಹೊರಹಾಕುವ ಪ್ರಯತ್ನ ಮಾಡಿದೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರು ಬದಲಾಯಿಸುವ ಕೆಲಸವನ್ನೇ ಮಾಡಿಕೊಂಡು ಬಂದಿದ್ದಾರೆ. ಇದು ಸಮಾಜದಲ್ಲಿ ದ್ವೇಷ ಬಿತ್ತಲು ಪ್ರಯೋಜನಕಾರಿಯೇ ವಿನಃ ಬೇರೆ ಯಾವುದೇ ರೀತಿಯಿಂದಲೂ ಉಪಯೋಗಕ್ಕೆ ಬಾರದ ಕಾರ್ಯ, ಉತ್ತರ ಪ್ರದೇಶವನ್ನು ನೋಡಿದರೆ ನಮಗೆ ಅದು ಅರ್ಥವಾಗುತ್ತದೆ ಎಂದು ಮಜೀದ್ ಅವರು ಹೇಳಿದರು.
ಈ ರೀತಿ ಹೆಸರು ಬದಲಾಯಿಸುವ ಮೂಲಕ ನೈಜ ಇತಿಹಾಸವನ್ನು ಜನರಿಂದ ಮರೆಮಾಚಬಹುದು ಎಂದು ಬಿಜೆಪಿ ತಿಳಿದಿದೆ. ಆದರೆ ಸತ್ಯ ಎಂದಿದ್ದರೂ ಸತ್ಯವೇ, ಅದನ್ನು ಎಂದಿಗೂ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದ ಅವರು, ಟಿಪ್ಪು ಸುಲ್ತಾನ್ ಜನಮಾನಸದಲ್ಲಿ ಮೈಸೂರು ಹುಲಿಯಾಗಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ, ಅದನ್ನು ಅಳಿಸುವುದು ಅಸಾಧ್ಯ ಎಂದು ಹೇಳಿದರು.