Home ಟಾಪ್ ಸುದ್ದಿಗಳು ದೇಶದಲ್ಲಿ ಹಸಿವಿನ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ : ಮೋದಿಗೆ ರಾಕೇಶ್ ಟಿಕಾಯತ್ ಟಾಂಗ್

ದೇಶದಲ್ಲಿ ಹಸಿವಿನ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ : ಮೋದಿಗೆ ರಾಕೇಶ್ ಟಿಕಾಯತ್ ಟಾಂಗ್

ಗಾಝಿಯಾಬಾದ್ : ದೇಶದಲ್ಲಿ ಹಸಿವಿನ ಮೇಲೆ ವ್ಯಾಪಾರ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಬೆನ್ನಲ್ಲೇ, ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ.

ಹೊಸ ವಿವಾದಾತ್ಮಕ ಕೃಷಿ ಮಾರುಕಟ್ಟೆ ಕಾನೂನುಗಳನ್ನು ರದ್ದುಗೊಳಿಸುವುದರ ಜೊತೆಗೆ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಕಾನೂನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದೇಶದಲ್ಲಿ ಹಸಿವಿನ ಮೇಲೆ ಯಾರೂ ವ್ಯಾಪಾರ ಮಾಡುವುದಿಲ್ಲ. ಹಸಿವು ಹೆಚ್ಚಾದರೆ, ಬೆಳೆಗಳ ಬೆಲೆಯನ್ನು ಅದಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಹಸಿವಿನ ಮೇಲೆ ವ್ಯಾಪಾರ ಬಯಸುವವರನ್ನು ದೇಶದಿಂದ ಹೊರಹಾಕಲಾಗುತ್ತದೆ ಎಂದು ಟಿಕಾಯತ್ ಹೇಳಿದ್ದಾರೆ.

ವಿಮಾನ ಟಿಕೆಟ್ ದರಗಳು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಏರಿಳಿತಗೊಳ್ಳುತ್ತವೆ. ಬೆಳೆಗಳ ಬೆಲೆಯನ್ನು ಅದೇ ರೀತಿ ನಿರ್ಧರಿಸಲಾಗುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ.

ಹೊಸ ಸಮುದಾಯವೊಂದು ಪ್ರತಿಭಟನೆಯಲ್ಲಿ ನಿರತವಾಗಿದೆ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಿಕಾಯತ್, ಹೌದು, ಈ ಬಾರಿ ರೈತರ ಸಮುದಾಯವೇ ಹೊಸ ಸಮುದಾಯವಾಗಿ ಹೊರಹೊಮ್ಮಿದೆ ಮತ್ತು ಜನರು ಸಹ ರೈತರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ರೈತರ ಪ್ರತಿಭಟನೆಯಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಒಡೆಯಲು ಯತ್ನಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಟಿಕಾಯತ್, ದೇಶದ ರೈತರು ಒಂದಾಗಿದ್ದಾರೆ. ಇಲ್ಲಿ ಸಣ್ಣ ರೈತ ಅಥವಾ ದೊಡ್ಡ ರೈತ ಇಲ್ಲ, ಚಳವಳಿ ಎಲ್ಲಾ ರೈತರಿಗೆ ಸೇರಿದೆ ಎಂದಿದ್ದಾರೆ.

Join Whatsapp
Exit mobile version