ನಾಗಮಂಗಲ: ಜೆಡಿಎಸ್ ‘ಪಂಚ ರತ್ನ ರಥ ಯಾತ್ರೆ’ಯ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿನಿಯರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಾವು ಕೂಡಿಟ್ಟ ಹಣವನ್ನು ದೇಣಿಗೆಯಾಗಿ ನೀಡಿ ‘ನೀವೇ ಸಿಎಂ ಆಗಬೇಕು ಅಂಕಲ್’ ಎಂದು ಶುಭ ಹಾರೈಸಿದ್ದಾರೆ.
ಸೋಮವಾರ ನಾಗಮಂಗಲದಲ್ಲಿ ಪಂಚ ರತ್ನ ರಥ ಯಾತ್ರೆಯ ಸಮಾವೇಶದಲ್ಲಿ ಮೂವರು ವಿದ್ಯಾರ್ಥಿನಿಯರು ಕುಮಾರಸ್ವಾಮಿಗೆ ದೇಣಿಗೆಯನ್ನು ನೀಡಿದ್ದಲ್ಲದೆ ಪಂಚರತ್ನ ಯೋಜನೆಯಡಿ ನಮ್ಮ ಊರಿನಲ್ಲೂ ಹೈಟೆಕ್ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪಂಚರತ್ನ ರಥಯಾತ್ರೆ ನನಗೆ ಅನೇಕ ಮಾನವೀಯ ಮುಖಗಳನ್ನು ಪರಿಚಯಿಸುತ್ತಿದೆ. ನಾಗಮಂಗಲದಲ್ಲಿ ರಥಯಾತ್ರೆ ನಿಮಿತ್ತ ನಡೆದ ಬೃಹತ್ ಸಮಾವೇಶದಲ್ಲಿ ನನ್ನನ್ನು ಹುಡುಕಿಕೊಂಡು ಬಂದ ಈ ಮೂವರು ಹೆಣ್ಣುಮಕ್ಕಳ ಮಮತೆ, ಕಾರುಣ್ಯವನ್ನು ಕಂಡು ನನ್ನ ಹೃದಯ ಉಕ್ಕಿಬಂದಿದೆ ಎಂದರು.
ಮೋನಿಶಾ, ಪಾವನಿ, ಶೋಭಾ ಎಂಬ ಮಕ್ಕಳು, ತಾವು ಕೂಡಿಟ್ಟುಕೊಂಡಿದ್ದ ಹಣವನ್ನು ನನಗೆ ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ಶಿಕ್ಷಣದ ಕುರಿತ ನನ್ನ ದೃಷ್ಟಿಕೋನಕ್ಕೆ ಮತ್ತಷ್ಟು ಸ್ಪಷ್ಟತೆ ನೀಡಿತು. ಈ ಮಾತುಗಳನ್ನು ನಾನು ಶುದ್ಧ ಅಂತಃಕರಣದಿಂದ ಕೇಳಿಸಿಕೊಂಡಿದ್ದೇನೆ. ಅವರ ಬೇಡಿಕೆಯನ್ನು ತಪ್ಪದೇ ಈಡೇರಿಸುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.