Home ಟಾಪ್ ಸುದ್ದಿಗಳು ದೆಹಲಿ ಮೇಯರ್ ಚುನಾವಣೆ: ಶೆಲ್ಲಿ ಒಬೇರಾಯ್ ಎಎಪಿ ಅಭ್ಯರ್ಥಿ

ದೆಹಲಿ ಮೇಯರ್ ಚುನಾವಣೆ: ಶೆಲ್ಲಿ ಒಬೇರಾಯ್ ಎಎಪಿ ಅಭ್ಯರ್ಥಿ

ನವದೆಹಲಿ: ನವದೆಹಲಿಯ ಮೇಯರ್ ಚುನಾವಣೆಯಲ್ಲಿ ಎಎಪಿ ಶೆಲ್ಲಿ ಒಬೇರಾಯ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯು ಶಾಲಿಮಾರ್ ಬಾಗ್ ವಾರ್ಡ್ ಕೌನ್ಸಿಲರ್ ರೇಖಾ ಗುಪ್ತರನ್ನು ಮೇಯರ್ ಹುದ್ದೆಗೆ ಮತ್ತು ಕಮಲ್ ಬಗ್ರಿಯವರನ್ನು ತಮ್ಮ ಉಪಮೇಯರ್ ಅಭ್ಯರ್ಥಿ ಎಂದು ಘೋಷಿಸಿದೆ.

ಕಮಲ್ ಜಿತ್ ಶೆರಾವತ್, ಗಜೇಂದ್ರ ದರಲ್, ಪಂಕಜ್ ಲೂತ್ರಾ ನಮ್ಮ ಸ್ಟ್ಯಾಂಡಿಂಗ್ ಸಮಿತಿಯ ಸದಸ್ಯರು ಎಂದೂ ಬಿಜೆಪಿ ಹೇಳಿದೆ. ಜನವರಿ 6ರಂದು ಮೇಯರ್ ಚುನಾವಣೆ ನಡೆಯಲಿದ್ದು ಇಂದು ನಾಮಪತ್ರ ಸಲ್ಲಿಕೆಯ ಕಡೆಯ ದಿನವಾಗಿದೆ. ದೆಹಲಿ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹರೀಶ್ ಖುರಾನಾ ಈ ಮಾಹಿತಿ ನೀಡಿದ್ದಾರೆ.

ಎಎಪಿಗೆ ದೆಹಲಿ ಮನಪಾದಲ್ಲಿ ಬಹುಮತವಿದೆ. ಆದರೆ ಇಲ್ಲಿ ಪಕ್ಷಾಂತರ ನಿಷೇಧ ಮಸೂದೆ ಚಾಲ್ತಿಯಲ್ಲಿ ಇಲ್ಲವಾದ್ದರಿಂದ ಬಿಜೆಪಿಯು ಒಳ ಪ್ರಯತ್ನವನ್ನು ನಡೆಸಿದ್ದು, ಮೇಯರ್ ಮತ್ತು ಉಪಮೇಯರ್ ಪೈಪೋಟಿಯು ತೀವ್ರತರದ್ದಾಗಿರುತ್ತದೆ ಎಂದು ವರದಿಯಿದೆ.

250 ಸದಸ್ಯರ ಪಾಲಿಕೆಯಲ್ಲಿ 134 ಸ್ಥಾನಗಳನ್ನು ಗೆದ್ದು ಎಎಪಿಯು ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಬಿಜೆಪಿ 104 ಸ್ಥಾನಗಳನ್ನು ಗೆದ್ದಿದೆ. ಅಲ್ಲದೆ ಮುಂಡ್ಕ ಸ್ವತಂತ್ರ ಕೌನ್ಸಿಲರ್ ಗಜೇಂದ್ರ ದಲಾಲ್ ಸಹ ಬಿಜೆಪಿ ಸೇರಿದ್ದಾರೆ. ಎಂಸಿಡಿ ಸ್ಟ್ಯಾಂಡಿಂಗ್ ಕಮಿಟಿಗಳಲ್ಲಿ ಬಿಜೆಪಿಯು ಮೂರನ್ನು ಗೆದ್ದರೆ ಮೇಯರ್ ಗಿರಿ ಗೆಲ್ಲಲು ಕೂಡ ಸಾಧ್ಯವಿದೆ ಎಂದು ಹೇಳಲಾಗಿದೆ.

ಗುಪ್ತ ಮತದಾನದ ಮೂಲಕ ಮೇಯರ್ ಚುನಾವಣೆ ನಡೆಯುತ್ತದೆ ಮತ್ತು ಕೌನ್ಸಿಲರ್’ಗಳು ಯಾರಿಗೆ ಬೇಕಾದರೂ ಮತ ಚಲಾಯಿಸಲು ಸ್ವತಂತ್ರರಿದ್ದಾರೆ. 250 ಕೌನ್ಸಿಲರ್’ಗಳಲ್ಲದೆ 7 ಜನ ಲೋಕ ಸಭಾ ಸದಸ್ಯರು, 3 ಮಂದಿ ರಾಜ್ಯ ಸಭಾ ಸದಸ್ಯರು, ಪಾಲಿಕೆ ವ್ಯಾಪ್ತಿಯ 15 ಮಂದಿ ಶಾಸಕರು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವರು.

ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲು ಒಟ್ಟು 274 ಸದಸ್ಯರಿಗೆ ಅವಕಾಶವಿದೆ. ಇದರಲ್ಲಿ ಎಎಪಿ 150 ಸದಸ್ಯರ ಬೆಂಬಲ ಹೊಂದಿದ್ದರೆ, ಬಿಜೆಪಿಗೆ 113 ಸದಸ್ಯರ ಬೆಂಬಲ ಮಾತ್ರ ಇರುವುದರಿಂದ ಮೇಯರ್’ಗಿರಿ ಲಪಟಾಯಿಸಲು ಬಿಜೆಪಿಗೆ ಸುಲಭ ಸಾಧ್ಯವಿಲ್ಲ.

ಕಾಂಗ್ರೆಸ್ 9 ಕೌನ್ಸಿಲರ್’ಗಳನ್ನು ಮತ್ತು ಇಬ್ಬರು ಸ್ವತಂತ್ರ ಕೌನ್ಸಿಲರ್’ಗಳು ಇದ್ದಾರೆ. ಸ್ಟ್ಯಾಂಡಿಂಗ್ ಸಮಿತಿಗಳ ಸದಸ್ಯರ ಸಂಖ್ಯೆ 18. ಇದರಲ್ಲಿ 12ನ್ನು ವಲಯ ರೀತ್ಯಾ ಮತ್ತು 6ನ್ನು ಕೌನ್ಸಿಲ್’ನೊಳಗೆ ಆಯ್ಕೆ ಮಾಡಲಾಗುತ್ತದೆ.

Join Whatsapp
Exit mobile version