ಸುರತ್ಕಲ್ : ಸಾಮಾಜಿಕ ಮುಂದಾಳು ಹಾಗೂ ಉದ್ಯಮಿ ಮುಮ್ತಾಝ್ ಅಲಿ ಅವರ ನಿಗೂಢ ಮರಣ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರನ್ನು ಬದ್ರಿಯಾ ಕೇಂದ್ರ ಜುಮಾ ಮಸೀದಿ ಕೃಷ್ಣಾಪುರ ಇದರ ಜಮಾಅತ್‌ನಿಂದ ಉಚ್ಛಾಟಿಸಿ ತೀರ್ಮಾನ ಕೈಗೊಳ್ಳಲಾಗಿದೆ.
ಇಂದು ಶುಕ್ರವಾರ ಜುಮಾ ನಮಾಝ್ ಬಳಿಕ ತುರ್ತು ಮಹಾ ಸಭೆ ನಡೆಸಿದ ಬದ್ರಿಯಾ ಕೇಂದ್ರ ಜುಮಾ ಮಸೀದಿ ಕೃಷ್ಣಾಪುರ ಇದರ ಆಡಳಿತ ಮಂಡಳಿಯು ಈ ತೀರ್ಮಾನ ತೆಗೆದುಕೊಂಡಿದ್ದು, ಪ್ರಕರಣದ ಆರೋಪಿಗಳಾಗಿರುವ ಅಬ್ದುಲ್ ಸತ್ತಾರ್, ಮುಸ್ತಫಾ ಮತ್ತು ಸಿರಾಜ್ ಅವರನ್ನು ಜಮಾಅತ್‌ನಿಂದ ಉಚ್ಛಾಟಿಸಿ ತೀರ್ಮಾನ ತೆಗೆದುಕೊಂಡಿದೆ.
ಜಮಾಅತ್ ಕಮಿಟಿ ಅಧ್ಯಕ್ಷರಾಗಿದ್ದ ಮುಮ್ತಾಝ್ ಅಲಿ ಅವರ ಅಕಾಲಿಕ ಮರಣಕ್ಕೆ ಕಾರಣಕರ್ತರಾಗಿರುವ ಆರೋಪ ಹೊತ್ತಿರುವ ಮೂವರನ್ನು ಜಮಾಅತ್‌ನಿಂದ ಉಚ್ಛಾಟಿಸುವ ತೀರ್ಮಾನವನ್ನು ಸಭೆಯು ಕೈಗೊಂಡಿದೆ.
ಜಮಾಅತ್‌ನಿಂದ ಉಚ್ಛಾಟನೆಗೊಂಡಿರುವ ಮುಸ್ತಫಾ ಅವರು ಜಮಾಅತ್ ಆಡಳಿತ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಸತ್ತಾರ್ ಅವರು ಸದಸ್ಯರಾಗಿದ್ದರು. ಸಿರಾಜ್ ಅವರು ಕೂಡ ಜಮಾಅತ್‌ಗೆ ಒಳಗೊಂಡಿದ್ದರು.