ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರಿಗೆ ಇನ್ನೂ ಮುಕ್ತಿ ಸಿಗಲಿಲ್ಲ. ಕುಟುಂಬಸ್ಥರು ಬಹುತೇಕ ಭರವಸೆ ಕಳಕೊಂಡಿದ್ದಾರೆ. ನತದೃಷ್ಟ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಏಳನೇ ದಿನಕ್ಕೆ ಕಾಲಿಟ್ಟಿದೆ.
ಕುಸಿದ ಸುರಂಗದಲ್ಲಿ 60 ಮೀಟರ್‌ವರೆಗೆ ಕೊರೆದರಷ್ಟೇ ಕಾರ್ಮಿಕರನ್ನು ರಕ್ಷಿಸಬಹುದಾಗಿದ್ದು, ನಿನ್ನೆಗೆ 24 ಮೀಟರ್‌ಗಳಷ್ಟು ಕೊರೆಯುವಲ್ಲಿ ಮಾತ್ರ ರಕ್ಷಣಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಇಂದಿನ ಮಾಹಿತಿ ದೊರಕಿಲ್ಲ.
ಸಿಕ್ಕಿಬಿದ್ದ ಎಲ್ಲಾ ಕಾರ್ಮಿಕರು ಇಲ್ಲಿಯವರೆಗೆ ದೈಹಿಕ, ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೈಪ್ಗಳ ಮೂಲಕ ಆಮ್ಲಜನಕ, ಔಷಧಿ, ಆಹಾರ ಮತ್ತು ನೀರಿನಂತಹ ಅಗತ್ಯ ಸರಬರಾಜನ್ನು ಮಾಡಲಾಗುತ್ತಿದೆ. ಮಾನಸಿಕ ತಜ್ಞರು ಸಹ ಕಾರ್ಮಿಕರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಎನ್ಎಚ್ಐಡಿಸಿಎಲ್ ನ ನಿರ್ದೇಶಕ ಅಂಶು ಮನೀಶ್ ಖಲ್ಖೋ ಹೇಳಿದ್ದಾರೆ.