ಹಾವೇರಿ: ಮನೆಯ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆಯೊಬ್ಬರ ಮೇಲೆ ಮುಸುಕುಧಾರಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದು ಆಕೆ ಅದೃಷ್ಟವಶಾತ್ ಪಾರಾಗಿರುವ ಘಟನೆ ಶಿಗ್ಗಾಂವಿ ತಾಲೂಕಿನ ಹುಲಗೂರಿಲ್ಲಿ ನಡೆದಿದೆ.
ಹುಲಗೂರಿನ ಮಹಿಳೆ ಸಲ್ಮಾ ಎಂಬವರು ತನ್ನ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್ ನಲ್ಲಿ ಬಂದಿದ್ದ ಮುಸುಕುಧಾರಿಗಳು ಗುಂಡು ಹಾರಿಸಿದ್ದು ಈ ವೇಳೆ ಕರೆಂಟ್ ಹೋಗಿದ್ದರಿಂದ ಕತ್ತಲಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾಳೆ.
ಗೋಡೆಗೆ ಗುಂಡು ತಾಗಿರುವುದು ಕಂಡುಬಂದಿದ್ದು, ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಮಹಿಳೆಯ ಮನೆಯವರು 14 ಜನರು ಪಾರಾಗಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಬೆಚ್ಚಿಬಿದ್ದ ಅಲ್ಲಿನ ಜನರು ಸಲ್ಮಾಳ ಮನೆ ಬಳಿ ಜಮಾಯಿಸಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಲ್ಮಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಪತಿ ಜಗಳ ಮಾಡಿಕೊಂಡಿದ್ದರಿಂದ ಸಲ್ಮಾ ಎರಡು ವರ್ಷಗಳಿಂದ ತವರುಮನೆ ಹುಲಗೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ಆದರೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮುಸುಕುಧಾರಿಗಳು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸಲ್ಮಾ, ಆಕೆಯ ಮಕ್ಕಳು, ತಂದೆ ಮತ್ತು ಅಣ್ಣ ತಮ್ಮಂದಿರು ಸೇರಿದಂತೆ ಒಟ್ಟು ಹದಿನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯ್ ಕುಮಾರ್ ಸೇರಿದಂತೆ ಶಿಗ್ಗಾಂವಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.