ದುಬೈ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿ ಸಂಭ್ರಮಿಸಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಸೂಪರ್-4 ಹಂತದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ, ಮೊದಲ ಬಾರಿ ಮೂರಂಕಿಯ ಮೊತ್ತವನ್ನು ತಲುಪಿದ್ದಾರೆ.
ಚುಟುಕು ಮಾದರಿಯಲ್ಲಿ ಮೊದಲನೆಯ ಮತ್ತು ವೃತ್ತಿಜೀವನದ 71ನೇ ಶತಕ ಇದಾಗಿದ್ದು, 1020 ದಿನಗಳ ಬಳಿಕ ಕೊಹ್ಲಿ, ಮೈದಾನದಲ್ಲಿ ಮತ್ತೊಮ್ಮೆ ತನ್ನ ಗತವೈಭವವನ್ನು ನೆನಪಿಸುವ ರೀತಿಯಲ್ಲಿ ಬ್ಯಾಟ್ ಬೀಸಿದ್ದಾರೆ. 2019ರ ನವೆಂಬರ್ 23ರಂದು ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊನೆಯದಾಗಿ ಶತಕ ಬಾರಿಸಿದ್ದರು.
ಅಫ್ಘಾನಿಸ್ತಾದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಕೊಹ್ಲಿ, 53 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ 61 ಎಸೆತಗಳಲ್ಲಿ 122 ರನ್‌ಗಳಿಸಿ ಅಜೇಯರಾಗುಳಿದರು. 12 ಬೌಂಡರಿ ಮತ್ತು 6 ಸಿಕ್ಸರ್‌ಗಳು ಈ ಸ್ಮರಣೀಯ ಇನ್ನಿಂಗ್ಸ್ ಒಳಗೊಂಡಿತ್ತು. ಸಿಕ್ಸರ್ ಮೂಲಕ ಶತಕ ತಲುಪಿದ ಕೊಹ್ಲಿ, ತಮ್ಮ ವಿವಾಹದ ರಿಂಗ್‌ನ್ನು ಚುಂಬಿಸಿ ಸಂಭ್ರಮಿಸಿದರು.
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ವೃತ್ತಿಜೀವನದ 105ನೇ ಪಂದ್ಯ ಇದಾಗಿದೆ.