ಕಾಬೂಲ್: ಸೆಪ್ಟೆಂಬರ್ 11 ರ ನಂತರವೂ ಅಮೆರಿಕ ಅಫ್ಘಾನಿಸ್ತಾನದಿಂದ ಮಿಲಿಟರಿಯನ್ನು ಹಿಂದಕ್ಕೆ ಕರೆಸದಿದ್ದರೆ ಸಶಸ್ತ್ರ ಸೇನೆಗೆ “ಪ್ರತಿಕ್ರಿಯಿಸುವ ಹಕ್ಕು” ಇದೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್, ಅಲ್ ಜಝೀರಾ ಸುದ್ದಿ ವಾಹಿನಿಯೊಂದಿಗಿನ ವಿಶೇಷ ಸಂದರ್ಶನದಲ್ಲಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನದಿಂದ ಸೆಪ್ಟೆಂಬರ್ 11ರೊಳಗೆ ಅಮೆರಿಕವು ತನ್ನ ಮಿಲಿಟರಿಯನ್ನು ಹಿಂತೆಗೆದುಕೊಳ್ಳಬೇಕೆಂದು ಗಡುವು ನೀಡಲಾಗಿತ್ತು. ಅಮೆರಿಕ ಸೈನ್ಯವನ್ನು ಹಿಂಪಡೆಯದಿದ್ದರೆ ಅಮೆರಿಕ ಮತ್ತು ತಾಲಿಬಾನ್ ನಡುವಿನ ದೀರ್ಘಕಾಲದ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ 2020 ರ ಫೆಬ್ರವರಿಯಲ್ಲಿ ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಒಪ್ಪಂದದ ಉಲ್ಲಂಘನೆಯಾಗಲಿದೆ ಎಂದು ಶಹೀನ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕವು ಅಫ್ಘಾನಿಸ್ತಾನದಿಂದ ತಮ್ಮ ಎಲ್ಲಾ ಮಿಲಿಟರಿಗಳು, ಸಲಹೆಗಾರರು ಮತ್ತು ಗುತ್ತಿಗೆದಾರರನ್ನು ಹಿಂತೆಗೆದುಕೊಳ್ಳುವುದಾಗಿ ಒಪ್ಪಂದದ ವೇಳೆ ಭರವಸೆ ನೀಡಿತ್ತು. ಸೈನ್ಯವನ್ನು ಹಿಂಪಡೆಯದಿದ್ದರೆ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಲಿದೆ ಎಂದು ಅವರು ಹೇಳಿದರು.