Home ಟಾಪ್ ಸುದ್ದಿಗಳು ಟ್ರಂಪ್ ಪದಗ್ರಹಣ | ಸೇವಕನನ್ನು ಆಹ್ವಾನಿಸಲಾಗಿದೆಯೇ ಹೊರತು ಮೋದಿಯನ್ನಲ್ಲ: ಸುಬ್ರಮಣಿಯನ್ ಸ್ವಾಮಿ ಮಾರ್ಮಿಕ ಪೋಸ್ಟ್

ಟ್ರಂಪ್ ಪದಗ್ರಹಣ | ಸೇವಕನನ್ನು ಆಹ್ವಾನಿಸಲಾಗಿದೆಯೇ ಹೊರತು ಮೋದಿಯನ್ನಲ್ಲ: ಸುಬ್ರಮಣಿಯನ್ ಸ್ವಾಮಿ ಮಾರ್ಮಿಕ ಪೋಸ್ಟ್

ನವದೆಹಲಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಇದೇ 20ರಂದು ಅಧಿಕಾರ ಸ್ವೀಕರಿಸಲಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತದ ಪ್ರತಿನಿಧಿಯಾಗಿ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


‘ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಭಾರತದ ನಾಯಕರನ್ನು ಔಪಚಾರಿಕ ಆಹ್ವಾನಿಸಲಾಗಿದೆ ಎಂದು ಭಾರತದ ಮಾಧ್ಯಮಗಳು ಮಾಡಿರುವ ಸುದ್ದಿಯನ್ನು ನೋಡಿ ಅಮೆರಿಕದಲ್ಲಿ ನನ್ನ ಸ್ನೇಹಿತರು ನಗುತ್ತಿದ್ದಾರೆ. ಸಮಾರಂಭಕ್ಕೆ ಸೇವಕನನ್ನು (ಜೈಶಂಕರ್) ಆಹ್ವಾನಿಸಲಾಗಿದೆಯೇ ಹೊರತು ಪ್ರಧಾನಿಯವರನ್ನಲ್ಲ (ಮೋದಿ). ಇದು ದೊಡ್ಡ ಅವಮಾನವಲ್ಲವೇ? ಆಹ್ವಾನ ಸ್ವೀಕರಿಸಿದ್ದಕ್ಕಾಗಿ ಸೇವಕನನ್ನು ವಜಾಗೊಳಿಸಿ’ ಎಂದು ಸ್ವಾಮಿ ಮಾರ್ಮಿಕವಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.


‘ಇತ್ತೀಚಿಗೆ ಮೋದಿ ಅವರು ಸೇವಕನನ್ನು (ಜೈಶಂಕರ್) ಅಮೆರಿಕಕ್ಕೆ ಕಳುಹಿಸಿದ್ದರು. ಜತೆಗೆ, ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡುವಂತೆ ಹೇಳಿ ಬರುವಂತೆಯೂ ಜೈಶಂಕರ್ಗೆ ಸೂಚಿಸಲಾಗಿತ್ತು. ಅದರಂತೆಯೇ ಜೈಶಂಕರ್ ನಡೆದುಕೊಂಡಿದ್ದರು. ಇಲ್ಲದಿದ್ದರೆ ಅವರು (ಜೈಶಂಕರ್) ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಿದ್ದರು’ ಎಂದು ಸ್ವಾಮಿ ಆರೋಪಿಸಿದ್ದಾರೆ.


ಸದ್ಯ ಡೊನಾಲ್ಡ್ ಟ್ರಂಪ್ ಅವರು ಮೋದಿಯನ್ನು ಆಹ್ವಾನಿಸುವ ಮನಸ್ಥಿತಿಯಲ್ಲಿಲ್ಲ. 2023ರಲ್ಲಿ ಟ್ರಂಪ್ ಅವರ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದು ಮೋದಿ ಘೋಷಿಸಿದ್ದರು. ಮೋದಿ ಅವರು ಆಹ್ವಾನವನ್ನು ತಿರಸ್ಕರಿಸುವ ಮೂಲಕ ಟ್ರಂಪ್ಗೆ ನೋವುಂಟು ಮಾಡಿದ್ದರು ಎಂದೂ ಸ್ವಾಮಿ ಹೇಳಿದ್ದಾರೆ.

Join Whatsapp
Exit mobile version