ಅಹಮದಾಬಾದ್: ಇತ್ತೀಚೆಗೆ ಮುಕ್ತಾಯಗೊಂಡ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದು, ಕಾಂಗ್ರೆಸ್ ನ ಇಮ್ರಾನ್ ಖೇಡವಾಲಾ ಅವರು 182 ಸದಸ್ಯ ಬಲದೊಂದಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.
ನಿರ್ಗಮಿತ ವಿಧಾನಸಭೆಯಲ್ಲಿದ್ದ ಮೂವರು ಮುಸ್ಲಿಂ ಶಾಸಕರೂ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು.
ಅಹಮದಾಬಾದ್ ನಗರದ ಜಮಾಲ್ಪುರ್-ಖಾಡಿಯಾ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾದ ಖೇಡವಾಲಾ ಅವರು ಚುನಾವಣೆಯಲ್ಲಿ 13,658 ಮತಗಳ ಅಂತರದಿಂದ ಗೆದ್ದು ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಖೇಡವಾಲಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭೂಷಣ್ ಭಟ್ ಅವರನ್ನು ಸೋಲಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮೂವರು ಹಾಲಿ ಶಾಸಕರು ಸೇರಿದಂತೆ ಆರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಇಬ್ಬರು ಶಾಸಕರು ಸೇರಿದಂತೆ ಐವರು ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.