ಶ್ರೀನಗರ: ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾದ ಸಹ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್’ಎಫ್) ನ ನಾಲ್ವರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿ ಕಾಶ್ಮೀರದ ಹಲವು ಭಾಗಗಳಲ್ಲಿ ಎನ್’ಐಎ ಅಧಿಕಾರಿಗಳು ಪೋಸ್ಟರ್ ಅಂಟಿಸಿದ್ದಾರೆ.
ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ನಾಲ್ವರು ಶಂಕಿತರು ಭಾರತದಲ್ಲಿ ಹಿಂಸಾಚಾರ ನಡೆಸಲು ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ತಮ್ಮ ಭಾಗವಾಗಿಸಿಕೊಳ್ಳುವ, ಪ್ರೇರೇಪಿಸುವ ಮತ್ತು ನೇಮಕಾತಿ ಮಾಡುವ ಸಂಚಿಗೆ ಸಂಬಂಧಿಸಿದಂತೆ ಎನ್ಐ’ಎಗೆ ಬೇಕಾಗಿದ್ದಾರೆ ಎನ್ನಲಾಗಿದೆ.
ಎನ್ಐಎ ಅಂಟಿಸಿರುವ ಪೋಸ್ಟರ್ ನಲ್ಲಿ ಪಾಕಿಸ್ತಾನಿ ಪ್ರಜೆಗಳಾದ ಸಲೀಮ್ ರೆಹಮಾನಿ ಅಲಿಯಾಸ್ ‘ಅಬು ಸಾದ್’, ಸೈಫುಲ್ಲಾ ಸಾಜಿದ್ ಜಟ್ ಮತ್ತು ಅವರ ಸ್ಥಳೀಯ ಸಹಚರರಾದ ಶ್ರೀನಗರದ ಸಜ್ಜದ್ ಗುಲ್ ಮತ್ತು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ರೆಡ್ವಾನಿ ಪಯೀನ್ನ ಬಸಿತ್ ಅಹ್ಮದ್ ದಾರ್ ಅವರ ಬಗ್ಗೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಮಾಹಿತಿಯನ್ನು ಹಂಚಿಕೊಳ್ಳಲು ಎನ್ಐಎ ತನ್ನ ಇಮೇಲ್ ವಿಳಾಸ, ಫೋನ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಸಂಖ್ಯೆಗಳನ್ನು ನೀಡಿದೆ. ಮಾಹಿತಿ ನೀಡುವವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ತಿಳಿಸಿದೆ.