ಬೆಂಗಳೂರು: ಕೋಮು ದ್ವೇಷ ಬಿತ್ತರಿಸುವ ಯಾವುದೇ ಕೃತ್ಯಗಳಲ್ಲಿ ವೈದ್ಯರು ಭಾಗವಹಿಸದಂತೆ ಕರ್ನಾಟಕ ವೈದ್ಯಕೀಯ ಮಂಡಳಿ (ಕೆ.ಎಂ.ಸಿ) ರಾಜ್ಯದ ಎಲ್ಲಾ ವೈದ್ಯರಿಗೆ ತನ್ನ ಸುತ್ತೋಲೆಯಲ್ಲಿ ಖಡಕ್ ಸೂಚನೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ರಿಜಿಸ್ಟಾರ್ ಡಾ. ಶ್ಯಾಮ್ ರಾವ್ ಬಿ. ಪಾಟೀಲ್, ರಾಜ್ಯದ ವೈದ್ಯರು ಕೋಮು ಸೌಹಾರ್ದತೆ ಕದಡುವ ವಿಚಾರದಲ್ಲಿ ಭಾಗವಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಕೋಮು ಸೌಹಾರ್ದತೆಗೆ ಹಾನಿ ಮಾಡುವಲ್ಲಿ ವೈದ್ಯರು ಸಕ್ರಿಯವಾಗಿ ಭಾಗವಹಿಸುತ್ತಿರುವ ಕುರಿತು ವೈದ್ಯಕೀಯ ಮಂಡಳಿಯ ಗಮನಕ್ಕೆ ತರಲಾಗಿದೆ. ವೈದ್ಯರು ರೋಗಿಯನ್ನು ಜಾತಿ ಧರ್ಮವನ್ನು ಗಣನೆಗೆ ತೆಗೆದುಕೊಳ್ಳದೆ ಚಿಕಿತ್ಸೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ ಕದಡುವ ವಿಚಾರದಲ್ಲಿ ವೈದ್ಯರು ಭಾಗವಹಿಸುತ್ತಿರುವುದು ವೃತ್ತಿಗೆ ಮಾಡುವ ಅಪಚಾರವಾಗಿದೆ ಎಂದು ತನ್ನ ಸುತ್ತೋಲೆಯಲ್ಲಿ ವೈದ್ಯಕೀಯ ಮಂಡಳಿ ಉಲ್ಲೇಖಿಸಿದೆ.