Home ಟಾಪ್ ಸುದ್ದಿಗಳು ಯಾರನ್ನು ಬೇಕಾದರೂ ಹುಲಿ ಅಥವಾ ಇಲಿ ಮಾಡುವ ಮಂತ್ರದಂಡ ಜನತೆಯ ಕೈಯಲ್ಲಿದೆ: ಸಿಎಂ ಬೊಮ್ಮಾಯಿ

ಯಾರನ್ನು ಬೇಕಾದರೂ ಹುಲಿ ಅಥವಾ ಇಲಿ ಮಾಡುವ ಮಂತ್ರದಂಡ ಜನತೆಯ ಕೈಯಲ್ಲಿದೆ: ಸಿಎಂ ಬೊಮ್ಮಾಯಿ

ತುಮಕೂರು(ಶಿರಾ): ಕೇಂದ್ರ ಸರ್ಕಾರದಿಂದ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ  500 ಕೋಟಿ ರೂ.ಗಳನ್ನು  ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಶಿರಾದ ಪ್ರೆಸಿಡೆನ್ಸಿ ಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ “ ಸಾರ್ವಜನಿಕ ಸಭೆ”ಯಲ್ಲಿ  ಪಾಲ್ಗೊಂಡು ಮಾತನಾಡಿದರು.

 ರಾಜ್ಯದಲ್ಲಿ 6000 ಕಿಮೀ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಮೇಲ್ಸೆತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ  1000 ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ರೈತ ಸಮ್ಮಾನ ಯೋಜನೆಯಡಿ 9,500 ಸಾವಿರ ಕೋಟಿ ರೂ.ಗಳನ್ನು ರೈತರ ಖಾತೆಗೆ ನೀಡಲಾಗಿದೆ. 1 ಕೋಟಿ ಜನರಿಗೆ  ಆಯುಷ್ಮಾನ್ ಭಾರತ ಯೋಜನೆ , ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ತುಮಕೂರು, ಶಿರಾ , ಚಿತ್ರದುರ್ಗ, ದಾವಣಗೆರೆ ರೈಲ್ವೆ ಯೋಜನೆಗೆ ಅನುಮೋದನೆಯನ್ನು ನೀಡಲಾಗಿದೆ. ಡಬಲ್ ಇಂಜಿನ್ ಸರ್ಕಾರವಿರುವ ಕಾರಣ, ಬೆಳೆಪರಿಹಾರ, ಮನೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಸಹಕಾರ ನೀಡಿದೆ. ಬಂದರುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ ಎಂದರು.

 ರಾಜ್ಯದ ಚಿತ್ರಣ ಸರಿಯಾಗಿ ನೀಡಿಲ್ಲ

ವಿರೋಧ ಪಕ್ಷದ ನಾಯಕರು ನರೇಂದ್ರ ಮೋದಿಯವರ ಕೊಡುಗೆ ಏನು, ಎಂದು ಪ್ರಶ್ನಿಸಿ  ನನ್ನನ್ನು   ನಾಯಿಮರಿಗೆ ಹೋಲಿಸಿದ್ದಾರೆ.  ನರೇಂದ್ರ ಮೋದಿಯವರು ಅಪ್ಪಟ ಪ್ರಜಾಪ್ರಭುತ್ವವಾದಿ. ರಾಜ್ಯಗಳ ಸ್ವಾಯತ್ತತೆ, ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರು. ಹಲವಾರು ಯೋಜನೆಗಳನ್ನು ಒದಗಿಸಿದ್ದಾರೆ. 15 ನೇ ಹಣಕಾಸಿನ ಯೋಜನೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ಬಂತು. ರಾಜ್ಯದ ಯೋಜನೆಗಳು, ಅವಶ್ಯಕತೆಗಳ ಬಗ್ಗೆ ಸರಿಯಾಗಿ ವಾದಿಸಲಿಲ್ಲ. ಅವರ ಮುಂದೆ ರಾಜ್ಯದ ಚಿತ್ರಣವನ್ನು ನೀಡಲಿಲ್ಲವಾದ್ದರಿಂದ ನಮಗೆ 15 ನೇ ಹಣಕಾಸಿನಲ್ಲಿ ಅನುದಾನ ಕಡಿಮೆಯಾಗಿದೆ. ಇದಕ್ಕೆ ನೇರವಾಗಿ ಅವರೇ ಕಾರಣ ಎಂದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುವ ಸಿದ್ದರಾಮಯ್ಯನವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನರೇಂದ್ರ ಮೋದಿಯವರು ಕೇಳದೇ ಕೊಡುವ ಕಾಮಧೇನುವಾಗಿದ್ದಾರೆ. ಯಾರನ್ನು ಹುಲಿ , ಯಾರನ್ನು ಇಲಿ ಮಾಡುವ ಮಂತ್ರದಂಡ ಕರ್ನಾಟಕ ಜನತೆಯ ಕೈಯಲ್ಲಿದೆ. ಕಾಂಗ್ರೆಸ್ ನವರು ಇಲಿ ಅಥವಾ ಹುಲಿಯಾಗುವ ಬಗ್ಗೆ ಜನ ತೀರ್ಮಾನಿಸಲಿದ್ದಾರೆ.

 ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಆರ್. ಅಶೋಕ್ ಹಾಗೂ ಮತ್ತಿತರರು ಹಾಜರಿದ್ದರು.

Join Whatsapp
Exit mobile version