ಬೆಂಗಳೂರು: ಆಗಸ್ಟ್ 23, ಸೋಮವಾರದಿಂದ ರಾಜ್ಯದಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಆರ್ ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಆತಂಕ ಇಲ್ಲದೆ ಮಕ್ಕಳು ಶಾಲೆಗೆ ಬರಬಹುದು. ಆಗಸ್ಟ್ 23ರ ಶಾಲೆ ಆರಂಭದ ದಿನ ಬೆಂಗಳೂರಿನ ಕೆಲ ಶಾಲೆಗಳಿಗೆ ಭೇಟಿ ಕೊಡುತ್ತೇನೆ. ನನ್ನ ಜೊತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕೂಡ ಬರುತ್ತಾರೆ. ಶಾಲೆಗಳ ಆರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆ ಆಗಿದೆ. ಶಿಕ್ಷಕರಿಗೆ ವ್ಯಾಕ್ಸಿನೇಷನ್ ಆಗಿದೆ, ಶಾಲೆಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಅಂತರ ಕಾಯ್ದುಕೊಂಡೇ ತರಗತಿಗಳನ್ನು ನಡೆಸಲಾಗುತ್ತದೆ, ದಿನ ಬಿಟ್ಟು ದಿನದಂತೆ ಬ್ಯಾಚ್ ಗಳನ್ನು ಮಾಡಿ ಶಾಲೆ ನಡೆಸಲಾಗುತ್ತದೆ. ಪೋಷಕರ ಸಮ್ಮತಿಯನ್ನ ಪಡೆದೇ ಮಕ್ಕಳು ಶಾಲೆಗೆ ಬರಬೇಕು ಮತ್ತು ಎಲ್ಲ ಪೋಷಕರು ಕೂಡ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಗಮನ ಹರಿಸಬೇಕು, ಶಾಲೆಗೆ ಹೋಗಿ ಬಂದ ತಕ್ಷಣ ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಬೇಕು ಎಂದು ಹೇಳಿದರು