ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರನ್ನು ಸ್ಥಳಾಂತರಿಸುವ ನಿರ್ಧಾರ ಅತ್ಯಂತ ಕ್ಷಿಷ್ಟಕರ ತೀರ್ಮಾನವಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶುಕ್ರವಾರ ರಾಷ್ಟ್ರಕ್ಕೆ ಸ್ಪಷ್ಟನೆ ನೀಡಿದ್ದಾರೆ.
ತಾಲಿಬಾನ್ ಹಠಾತ್ ಗೆಲುವಿನ ಹಿನ್ನೆಲೆಯಲ್ಲಿ ಅಸ್ತವ್ಯಸ್ತಗೊಂಡ ನಿರ್ಗಮನದ ಹಾದಿಯ ಕುರಿತು ಜೋ ಬೈಡನ್ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ತಾಲಿಬಾನ್ ಅಕ್ರಮಿತ ಕಾಬೂಲ್ ನಿಂದ ಅಮೆರಿಕ, ವಿದೇಶಿ ಮತ್ತು ಅಫ್ಘಾನ್ ಮಿತ್ರರಾಷ್ಟ್ರಗಳ ನಾಗರಿಕರನ್ನು ಸ್ಥಳಾಂತರಿಸುವುದು ಅಪಾಯಕಾರಿ ಬೆಳವಣಿಗೆಯೆಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಈ ಪ್ರಕ್ರಿಯೆ ಇತಿಹಾಸದ ಅತಿದೊಡ್ದ, ಕ್ಷಿಷ್ಟಕರ ಏರ್ ಲಿಫ್ಟ್ ಗಳಲ್ಲಿ ಒಂದಾಗಿದೆಯೆಂದು ಅವರು ಶ್ವೇತಭವನದ ದೂರದರ್ಶನದ ನೇರ ಸಂದರ್ಶನದಲ್ಲಿ ತಿಳಿಸಿದರು. ಮಾತ್ರವಲ್ಲದೆ ಅಂತಿಮ ಫಲಿತಾಂಶದ ಕುರಿತು ಭರವಸೆ ನೀಡಲು ನನ್ನಿಂದ ಸಾಧ್ಯವಿಲ್ಲವೆಂದು ಅವರು ತಿಳಿಸಿದರು. ಈಗಾಗಲೇ ಒಂದು ವಾರದ ಅವಧಿಯಲ್ಲಿ 13,000 ಮಂದಿಯನ್ನು ಸ್ಥಳಾಂತರಿಸಲಾಗಿದೆಯೆಂದು ಅವರು ಶ್ವೇತಭವನಕ್ಕೆ ಮಾಹಿತಿ ನೀಡಿದರು.
20 ವರ್ಷಗಳ ಯುದ್ಧದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಎಷ್ಟು ಮಂದಿ ಅಮೆಕರಿಕನ್ನು ವಾಸವಾಗಿದ್ದಾರೆಂದು ಸರ್ಕಾರದ ಬಳಿಯಲ್ಲಿ ಮಾಹಿತಿಯಿಲ್ಲವೆಂದು ಬೈಡನ್ ವಿಷಾದ ವ್ಯಕ್ತಪಡಿಸಿದರು. ಅಫ್ಘಾನ್ ನಿಂದ ವಾಪಸಾಗ ಬಯಸುವ ಅಮೆರಿಕನ್ನರನ್ನು ತಾಯ್ನಾಡಿಗೆ ಕರೆತರುವ ನಿಟ್ಟಿನಲ್ಲಿ ಪ್ರಾಮಾಣಿಕ ಕ್ರಮ ಕೈಗೊಳ್ಳುತ್ತೇನೆಂದು ಬೈಡನ್ ಅಮೆರಿಕನ್ ನಾಗಕರಿಗೆ ಭರವಸೆ ನೀಡಿದರು.