ಬೆಂಗಳೂರು: ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ.
ಚಿತ್ರದುರ್ಗ ಮೂಲದ ಬಿ.ಎಲ್. ವೇಣು ಅವರ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಉಲ್ಲೇಖ ಮಾಡಲಾಗಿದೆ.
ಅನಾಮಧೇಯ ವ್ಯಕ್ತಿಯ ಕೈ ಬರಹದಲ್ಲಿ ಬರೆದ ಬೆದರಿಕೆ ಪತ್ರದಲ್ಲಿ ಇವರನ್ನು ಗಲ್ಲಿಗೇರಿಸಬೇಕು ಅಥವಾ ಗುಂಡಿಕ್ಕಿ ಕೊಲ್ಲಬೇಕು ಅಥವಾ ದೇಶದಿಂದ ಇವರನ್ನು ಉಟ್ಟ ಬಟ್ಟೆಯಲ್ಲೇ ಓಡಿಸಬೇಕು ಎಂದು ಬರೆಯಲಾಗಿದೆ.
ಸಾವರ್ಕರ್ ಕುರಿತು ನೀಡಿದ ಹಗುರ ಮಾತಿಗೆ ಕ್ಷಮೆ ಕೇಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಸಾವರ್ಕರ್ ಬಗ್ಗೆ ನೀವು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರುವುದಿಲ್ಲ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು 5 ನೇ ತರಗತಿ ಪಠ್ಯದಲ್ಲಿ ಹಲವು ವಿಷಯಗಳನ್ನು ತೆಗೆದಿದ್ದಾರೆ. ಬರಗೂರು ಅವರಿಗೆ ಬೆಂಬಲಿಸುವ 61 ಸಾಹಿತಿಗಳನ್ನು ಏನು ಮಾಡಬೇಕು? ಪಠ್ಯದಲ್ಲಿ ಭಗವದ್ಗೀತೆ ಅಂಶ ಸೇರಿಸದಂತೆ ಎಲ್ಲರೂ ಸರ್ಕಾರಕ್ಕೆ ಪತ್ರ ನೀಡಿದ್ದರು. ಬಿ.ಎಲ್. ವೇಣು ಅವರೇ ಇಂಥವರಿಗೆ ನೀವು ಬುದ್ದಿ ಹೇಳಿ, ಇಲ್ಲ ಕಾಲನ ಉಪಚಾರಕ್ಕೆ ಸಿದ್ದರಾಗಿ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಅಂಚೆ ಮೂಲಕ ಕಾದಂಬರಿಕಾರ ಬಿ.ಎಲ್. ವೇಣು ಅವರಿಗೆ ಪತ್ರ ರವಾನೆ ಮಾಡಲಾಗಿದೆ.
ಹಂಸನಂತೆ ಇದ್ದ ಹಂಸಲೇಖರನ್ನು ಕಂಸನಂತೆ ಮಾಡಿಬಿಟ್ಟಿದ್ದಾರೆ ಈ ತಿಳಿಗೇಡಿ 61 ಮಂದಿ ಸಾಹಿತಿಗಳು ಎಂದು ಪತ್ರದಲ್ಲಿ ಬರೆಯಲಾಗಿದೆ.