Home ಟಾಪ್ ಸುದ್ದಿಗಳು ದಾರಿ‌ ಮಧ್ಯೆ ಆಂಬ್ಯುಲೆನ್ಸ್ ನಿಲ್ಲಿಸಿ ರೋಗಿಗೆ ಮದ್ಯ ಕುಡಿಸಿದ ಡ್ರೈವರ್; ವೀಡಿಯೋ ವೈರಲ್

ದಾರಿ‌ ಮಧ್ಯೆ ಆಂಬ್ಯುಲೆನ್ಸ್ ನಿಲ್ಲಿಸಿ ರೋಗಿಗೆ ಮದ್ಯ ಕುಡಿಸಿದ ಡ್ರೈವರ್; ವೀಡಿಯೋ ವೈರಲ್

ಭುವನೇಶ್ವರ: ರೋಗಿಯನ್ನು ಕೊಂಡೊಯ್ಯುವಾಗ ದಾರಿ‌ ಮಧ್ಯೆ ಆಂಬ್ಯುಲೆನ್ಸ್ ನಿಲ್ಲಿಸಿ ಡ್ರೈವರ್ ಮದ್ಯಪಾನ ಮಾಡಿ ರೋಗಿಗೂ ಕುಡಿಸಿದ ಘಟನೆ ಒಡಿಶಾದ ಜಗತ್ ಸಿಂಗ್ ಪುರ್ ಜಿಲ್ಲೆಯ ತಿರ್ತೋಲ್ ಪೊಲೀಸ್ ವ್ಯಾಪ್ತಿಯ ಕಟಕ್-ಪಾರಾದೀಪ್ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.


ಭಾನುವಾರ ರೋಗಿಯನ್ನು ಪಾರಾದೀಪ್‌ನಿಂದ ಕಟಕ್‌ನ ಖಾಸಗಿ ಆಸ್ಪತ್ರೆಗೆ ಕಾಲಿನ ಮುರಿತಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ವಿಚಾರಣೆಗೆ ಒಳಪಡಿಸಿದಾಗ ರೋಗಿಗೆ ಮದ್ಯ ನೀಡಿರುವುದಾಗಿ ಒಪ್ಪಿಕೊಂಡ ಚಾಲಕ ‘ರೋಗಿಯು ಆಲ್ಕೋಹಾಲ್ ಕೇಳಿದಾಗ ಅವನಿಗೆ ಕೊಟ್ಟಿದ್ದೇನೆ. ಹೆದ್ದಾರಿಯಲ್ಲಿನ ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿದಾಗ ನನ್ನ ಜೊತೆ ಆತನೂ ಕುಡಿದಿದ್ದಾನೆ ಎಂದು ಹೇಳಿದ್ದಾನೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗತ್‌ಸಿಂಗ್‌ಪುರ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ಡಾ.ದಾಶ್ ಅವರು, ಇದು ಖಾಸಗಿ ಆಂಬ್ಯುಲೆನ್ಸ್ ಆಗಿರುವುದರಿಂದ ಸಂಬಂಧಿಪಟ್ಟ ಆರ್‌ಟಿಒ ಮತ್ತು ಪೊಲೀಸ್ ಠಾಣೆ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.


ವಿಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಯ ಬಗ್ಗೆ ತನಿಖೆ ನಡೆಸಿ ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.


ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಮುಂದೆ ಎಫ್‌ಐಆರ್ ದಾಖಲಿಸಿದರೆ ತನಿಖೆ ನಡೆಸಲಾಗುವುದು ಎಂದು ತಿರ್ತೋಲ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ ಪೆಕ್ಟರ್ ಜುಗಲ್ ಕಿಶೋರ್ ದಾಸ್ ಹೇಳಿದ್ದಾರೆ.

Join Whatsapp
Exit mobile version