Home ಟಾಪ್ ಸುದ್ದಿಗಳು 2021ರಲ್ಲಿ ದೇಶದಲ್ಲಿ ನಿತ್ಯ ಸರಾಸರಿ 450 ಮಂದಿ ಆತ್ಮಹತ್ಯೆ; ಆಘಾತಕಾರಿ ಮಾಹಿತಿ ಹಂಚಿಕೊಂಡ ಕೇಂದ್ರ ಸರ್ಕಾರ

2021ರಲ್ಲಿ ದೇಶದಲ್ಲಿ ನಿತ್ಯ ಸರಾಸರಿ 450 ಮಂದಿ ಆತ್ಮಹತ್ಯೆ; ಆಘಾತಕಾರಿ ಮಾಹಿತಿ ಹಂಚಿಕೊಂಡ ಕೇಂದ್ರ ಸರ್ಕಾರ

ನವದೆಹಲಿ: 2021ರಲ್ಲಿ ದೇಶದಲ್ಲಿ ನಿತ್ಯ ಸರಾಸರಿ 450 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆಘಾತಕಾರಿ ವಿಚಾರವನ್ನು ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.


ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌’ಸಿಆರ್‌’ಬಿ)ಯ ದತ್ತಾಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ, 2021ರಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.


ನಿತ್ಯ 115 ಮಂದಿ ದಿನಗೂಲಿಗಳು, 63 ಮಂದಿ ಗೃಹಿಣಿಯರು ಸೇರಿ 2021ರಲ್ಲಿ ಒಟ್ಟು 1,64,033 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ವರ್ಷದಲ್ಲಿ ಒಟ್ಟು 42,004 ದಿನಗೂಲಿ ನೌಕರರು, 23,179 ಗೃಹಣಿಯರು, 20,231 ಸ್ವ ಉದ್ಯೋಗಿಗಳು, 15,870 ವೇತನದಾರರು, 13,089 ವಿದ್ಯಾರ್ಥಿಗಳು, 12,055 ಉದ್ಯಮ ವಲಯದ ಮಂದಿ, 11,431 ಮಂದಿ ಖಾಸಗಿ ವಲಯದ ಕೆಲಸಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.


ಕೃಷಿ ವಲಯದ 10,881 ಮಂದಿ, 5,563 ಕೃಷಿ ಕಾರ್ಮಿಕರು, 5,318 ಮಂದಿ ರೈತರು, ತಮ್ಮ ಜಮೀನಿನಲ್ಲಿ ತಾವೇ ದುಡಿಯುತ್ತಿದ್ದ 5,318 ಜನ, ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದ 512 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ನೀಡಿದ ಲಿಖಿತ ಮಾಹಿತಿಯಲ್ಲಿದೆ.

Join Whatsapp
Exit mobile version