►ಎಫ್.ನುಸೈಬಾ. ಕಲ್ಲಡ್ಕ
ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ ಪ್ರತಿಯೊಬ್ಬ ಪ್ರಜೆಗೂ ಡಿಸೆಂಬರ್ ೬ ಒಂದು ಕರಾಳ ದಿನವಾಗಿ ಗೋಚರಿಸಲಿದೆ. ಶತಮಾನಗಳಿಂದಲೂ ಮುಸ್ಲಿಮರ ಆರಾಧನಾ ಕೇಂದ್ರವಾಗಿ ನೆಲೆಯೂರಿದ್ದ ಬಾಬರಿ ಮಸ್ಜಿದ್ ಧ್ವಂಸ ಕೇವಲ ಒಂದು ಸಮುದಾಯದ ಭಾವನೆಗಳ ಮೇಲೆ ನಡೆದ ದಾಳಿಯಾಗಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದ ಕೋಟ್ಯಂತರ ಭಾರತೀಯರ ನಂಬಿಕೆಗೆ ನೀಡಿದ ಕೊಡಲಿಯೇಟಾಗಿತ್ತು.
ಈ ದೇಶದ ಸಂವಿಧಾನ, ನ್ಯಾಯ ವ್ಯವಸ್ಥೆಯ ಮೇಲೆ ಮನುವಾದಿ ಫ್ಯಾಸಿಸಂ ನಡೆಸಿದ ಪ್ರಹಾರವಾಗಿತ್ತು. ರಾಮನ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಹಿಂದುತ್ವವಾದಿಗಳು ನಡೆಸಿದ ಘೋರ ಅಪರಾಧವಾಗಿತ್ತು. ಬಿಜೆಪಿಯ ಪಾಲಿಗೆ ಮಸೀದಿ ಧ್ವಂಸ, ಮಂದಿರ ನಿರ್ಮಾಣ ಇವೆಲ್ಲ ರಾಮನ ಮೇಲಿನ ನಂಬಿಕೆಯ ಪ್ರತೀಕವಲ್ಲ, ಬದಲಾಗಿ ಇದು ಕೇವಲ ರಾಜಕೀಯ ಅಸ್ತ್ರ . ಈ ಮಾತನ್ನು ಪುಷ್ಟೀಕರಿಸುವಂತೆ, ಕೇವಲ ಎರಡು ಸೀಟುಗಳಿಂದ ಆರಂಭಗೊಂಡ ಬಿಜೆಪಿಯ ರಾಜಕೀಯ ರಂಗ ಪ್ರವೇಶ ಬಾಬರಿಯ ಧ್ವಂಸದ ನಂತರ 1996 ರ ಲೋಕಸಭಾ ಚುನಾವಣೆಯಲ್ಲಿ 161 ಸೀಟುಗಳನ್ನು ಗೆಲ್ಲುವ ಮೂಲಕ ವಿಜ್ರಂಭಿಸಿತ್ತು. ಈ ಮೂಲಕ ಮುನ್ನಲೆಗೆ ಬಂದ ಹಿಂದುತ್ವ ರಾಜಕಾರಣವು ಈಗ ಸರ್ವವ್ಯಾಪಿಯಾಗಿ ಹಮ್ಮಿಕೊಂಡು ಹಿಂದೂ ರಾಷ್ಟ್ರ ಸ್ಥಾಪನೆಯ ತನ್ನ ಗುರಿಯನ್ನು ಸಾಧಿಸುವ ಹಂತದಲ್ಲಿದೆ. ಇದಕ್ಕೆ ಕಾಂಗ್ರೆಸ್ ನ ಮೃಧು ಹಿಂದುತ್ವ ಧೋರಣೆಯು ಕೂಡ ಅವಕಾಶ ಕಲ್ಪಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಬಾಬರಿಯ ಪ್ರಕರಣದಲ್ಲೂ ಹೀಗೆ ನಡೆದಿದೆಯೆಂದು ಸ್ವತಃ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಬಾಬರಿ ಧ್ವಂಸವನ್ನು ಗುರಿಯಾಗಿಸಿಕೊಂಡು ಅಡ್ವಾಣಿ ಹಮ್ಮಿಕೊಂಡ ರಥಯಾತ್ರೆಗೆ ಪ್ರತಿಯಾಗಿ ಮಣಿಶಂಕರ್ ಅಯ್ಯರ್ ಅವರು ರಾಮ್ ರಹೀಂ ಯಾತ್ರೆಯನ್ನು ಆಯೋಜಿಸುತ್ತಾರೆ. ಆದರೆ ಈ ಯಾತ್ರೆಗೆ ನಿರ್ಬಂಧ ವಿಧಿಸುವ ಅಂದಿನ ಪ್ರಧಾನಿ ನರಸಿಂಹರಾವ್ ಅವರು ಮಣಿಶಂಕರ್ ಅಯ್ಯರ್ ಅವರೊಂದಿಗೆ `ಅಯ್ಯರ್, ನಿಮ್ಮ ಯಾತ್ರೆಯ ಬಗ್ಗೆ ನನಗೆ ತಕರಾರಿಲ್ಲ.ಆದರೆ ನೀವು ಜಾತ್ಯಾತೀತತೆಗೆ ನೀಡುವ ವ್ಯಾಖ್ಯಾನಕ್ಕೆ ನನ್ನ ಸಮ್ಮತಿಯಿಲ್ಲ. ಎಷ್ಟೇ ಆಗಲಿ ಇದು ಹಿಂದೂ ರಾಷ್ಟ್ರವಲ್ಲವೇ ?’ ಎಂದು ಪ್ರಶ್ನಿಸುತ್ತಾರೆ.
ಈ ಮನಸ್ಥಿತಿಯಾಗಿದೆ ಇಂದು ಹಿಂದುತ್ವವನ್ನು ಉತ್ತುಂಗಕ್ಕೆ ಏರಿಸಿರುವುದು. ಭಾವನಾತ್ಮಕ ನೆಲೆಯಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿಯು ತನ್ನ ಅಧಿಕಾರ ಪ್ರಭಾವದಿಂದ ಸಾಂವಿಧಾನಿಕ ಮೌಲ್ಯಗಳನ್ನು ಮೂಲೆಗುಂಪಾಗಿಸಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿರುವಂತೆ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ತನ್ನ ಆಡಳಿತವನ್ನು ಅಲ್ಪವೂ ಮುಲಾಜಿಲ್ಲದೆ ಸಮರ್ಥವಾಗಿ ನಿಭಾಯಿಸಿದ್ದಲ್ಲಿ ಬಾಬರಿಯು ಧರೆಗುರುಳುತ್ತಿರಲಿಲ್ಲ. ಇದರ ಲಾಭ ಪಡೆದ ಆರೆಸ್ಸೆಸ್ ನ ಕರಾಳ ಕೈಗಳಲ್ಲಿ ಭಾರತವಿಂದು ನಲುಗುತ್ತಿರಲಿಲ್ಲ. ಚುನಾವಣೆಯ ಸಮಯದಲ್ಲಿ ಅಲ್ಪಸಂಖ್ಯಾತರ ಮತಗಳಿಗಾಗಿ ಹಿಂದುತ್ವದ ವಿರುದ್ಧ ಹರಿಹಾಯುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಇಬ್ಬಗೆಯ ನೀತಿಯನ್ನು ಪ್ರದರ್ಶಿಸಿ ತನಗೆ ಮತ ನೀಡಿದ ಜಾತ್ಯತೀತ ಮತದಾರರನ್ನು ಕಡೆಗಣಿಸಿ ಕೋಮುವಾದಿಗಳ ಓಲೈಕೆಯಲ್ಲಿ ನಿರತವಾಗುತ್ತದೆ. ಇದರ ಪರಿಣಾಮವೇ ಇಂದು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್’ಗಢದಲ್ಲಿ ಹಿಂದುತ್ವದ ಜಯಭೇರಿಗೆ ಅವಕಾಶ ಒದಗಿಬಂದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಏಕತೆ, ಸಮಗ್ರತೆಗೆ ಮಾರಕವಾಗಿರುವ ಹಿಂದುತ್ವವನ್ನು ಪಸರಿಸಲು ಬಿಜೆಪಿ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯನ್ನೂ ತನ್ನ ಅಧೀನಕ್ಕೊಳಪಡಿಸುತ್ತಿದೆ. ಸುಪ್ರೀಂ ಕೋರ್ಟ್ ಹಿರಿಯ ಸಮಾಲೋಚಕರು ಆಗಿರುವ ಡಾ. ಮೋಹನ್ ಗೋಪಾಲ್ ಅವರು ಹೇಳುವಂತೆ `ಮೋದಿ ಸರ್ಕಾರದಲ್ಲಿ ನೇಮಿಸಲಾದ ಒಂಭತ್ತಕ್ಕೂ ಹೆಚ್ಚು ನ್ಯಾಯಾಧೀಶರು ಸಂವಿಧಾನಕ್ಕಿಂತ ಸನಾತನ ಧರ್ಮವನ್ನು ಈ ದೇಶದ ಕಾನೂನಿನ ಜನನಿಯೆಂದು ಭಾವಿಸುತ್ತಾರೆ. ತಮ್ಮ ನ್ಯಾಯಾದೇಶಗಳಲ್ಲಿ ಸನಾತನ ಧರ್ಮವನ್ನು ಸಂವಿಧಾನಕ್ಕಿಂತ ಮೇಲೆಂದು ಉಲ್ಲೇಖಿಸುತ್ತಲೇ ಆದೇಶಗಳನ್ನು ನೀಡುತ್ತಾರೆ. ಹಿಂದುತ್ವವಾದಿ ನ್ಯಾಯಾಧೀಶರನ್ನು ನೇಮಕ ಮಾಡುತ್ತಾ ಮುಂದಿನ ಒಂದು ದಶಕದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸುವ ಯೋಜನೆ ಇದೆ’ ಎಂದು ಅವರು ಎಚ್ಚರಿಸುತ್ತಾರೆ. ದಮನಿತ ವರ್ಗಗಳ ಕಟ್ಟ ಕಡೆಯ ಆಶ್ವಾಸನೆಯಾಗಬೇಕಿದ್ದ ನ್ಯಾಯ ವ್ಯವಸ್ಥೆಯ ಮೇಲೂ ಹಿಂದುತ್ವ ರಾಜಕಾರಣವು ಮೇಳೈಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.
ಹಿಂದುತ್ವ ರಾಜಕಾರಣವು ದೇಶವನ್ನು ಯಾವ ಮಟ್ಟಕ್ಕೆ ತಲುಪಿಸಿದೆ ಎಂದು ಕಳೆದ ಒಂಭತ್ತು ವರ್ಷಗಳಿಂದ ನಾವು ಗಮನಿಸುತ್ತಿದ್ದೇವೆ. ಆರ್ ಎಸ್ ಎಸ್ ನ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಿವೇಚನಾ ಶಕ್ತಿ ಬೇಕಾಗಿಲ್ಲ ಎನ್ನುವ ಗೋಳ್ವಲ್ಕರ್ ಮಾತುಗಳೇ ಹಿಂದುತ್ವದ ಅವಿವೇಕತೆಯನ್ನು ಬೊಟ್ಟು ಮಾಡುತ್ತದೆ. CAA ಜಾರಿ ಮಾಡುತ್ತೇವೆ ಎಂಬ ಅಮಿತ್ ಶಾ ಅವರ ಪುನರುಚ್ಚಾರದ ಹೇಳಿಕೆಗಳು , ಜನವರಿ ತಿಂಗಳಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ, ಏಕ ಸಿವಿಲ್ ಕೋಡ್ ನ ಪ್ರಸ್ತಾವನೆ, ಜ್ಞಾನವ್ಯಾಪಿ ಮಸೀದಿ, ಇವೆಲ್ಲವೂ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ಬಳಸುತ್ತಿರುವ ಅಸ್ತ್ರಗಳು. ಈ ಅಸ್ತ್ರಗಳು ಬಿಜೆಪಿ ಪಾಲಿಗೆ ವರದಾನವಾದರೆ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ವೇಳೆ ಈ ಧರ್ಮ ಲೇಪಿತ ಅಸ್ತ್ರಗಳು ಬಿಜೆಪಿಗೆ ತಿರುಗುಬಾಣವಾಗಿ ಅತೀ ದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ತನ್ನ ಮೃಧು ಹಿಂದುತ್ವವನ್ನು ಬದಿಗೆ ಸರಿಸಿ ಆರ್ ಎಸ್ ಎಸ್, ಬಿಜೆಪಿಯ ವಿರುದ್ಧ ರಾಜಿ ರಹಿತ ಸಿದ್ಧಾಂತವನ್ನು ಪ್ರದರ್ಶಿಸಿದರೆ ಮಾತ್ರವೇ ಜಾತ್ಯತೀತ ಪರಂಪರೆಯು ಈ ದೇಶದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯ.ಇಲ್ಲವಾದಲ್ಲಿ ಬಾಬರಿ ಮಸೀದಿಯ ಧ್ವಂಸದಂತೆ ಈ ದೇಶದ ಸಂವಿಧಾನವು ಧ್ವಂಸಗೊಳ್ಳುವ ದಿನಗಳು ದೂರವಿಲ್ಲ. ಛಿದ್ರತೆಯು ಹಿಂದುತ್ವದ ನೀತಿಯಾದರೆ ಒಕ್ಕೂಟವೇ ಪ್ರಜಾತಂತ್ರದ ಹಿರಿಮೆ. ನ್ಯಾಯವು ಜೀವಿಸಬೇಕಾದರೆ ಅನ್ಯಾಯವು ಮರೀಚಿಕೆಯಾಗಬೇಕು. ಸಮಾನತೆ, ಸಹಬಾಳ್ವೆಯು ಸಾಕ್ಷಾತ್ಕಾರಗೊಳ್ಳಲು ಹಿಂದುತ್ವ ರಾಜಕಾರಣದ ಮೂಲೋತ್ಪಾಟನೆಯಾಗಬೇಕು.