ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ಅವರ ರೆಡ್ಡಿ ಅವರ ಸಹೋದರಿ ಹಾಗೂ ವೈಎಸ್’ಆರ್’ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಕುಳಿತಿದ್ದ ಕಾರನ್ನು ಪೊಲೀಸರು ಎಳೆದೊಯ್ದ ಘಟನೆ ಮಂಗಳವಾರ ನಡೆದಿದೆ.
ಶರ್ಮಿಳಾ ರೆಡ್ಡಿ ಒಳಗಡೆ ಕುಳಿತಿದ್ದರೂ ಅವರ ಕಾರನ್ನು ಟೋ ಟ್ರಕ್ ಮೂಲಕ ಪೊಲೀಸರು ಎಳೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ. ಜನರೂ ಅದರ ಹಿಂದೆಯೇ ಓಡಿ ಹೋಗುತ್ತಿರುವುದು ವೀಡಿಯೋದಲ್ಲಿ ಕಾಣಬಹುದು. ಅನೇಕ ವೈಎಸ್’ಆರ್’ಟಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶರ್ಮಿಳಾ ರೆಡ್ಡಿ ಎರಡನೇ ಬಾರಿಗೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಆಡಳಿತಾರೂಢ ಟಿಆರ್’ಎಸ್ ವಿರುದ್ಧ ವೈಎಸ್ ಶರ್ಮಿಳಾ ಸೋಮವಾರ ವಾರಂಗಲ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ವೈಎಸ್ ಆರ್ ಕಾಂಗ್ರೆಸ್ ಹಾಗೂ ಟಿಆರ್’ಎಸ್ ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಶರ್ಮಿಳಾ ಅವರ ಬೆಂಗಾವಲು ವಾಹನ ಮೇಲೆ ದಾಳಿ ನಡೆಸಿದ್ದ ಟಿಆರ್’ಎಸ್ ಕಾರ್ಯಕರ್ತರು ಬಸ್’ವೊಂದಕ್ಕೆ ಬೆಂಕಿ ಹಚ್ಚಿದ್ದಲ್ಲದೆ, ವೈಎಸ್’ಆರ್’ಟಿಪಿಯ ಕೆಲ ಮುಖಂಡರ ಕಾರುಗಳನ್ನು ಧ್ವಂಸಗೊಳಿಸಿದ್ದರು. ಈ ಸಂಬಂಧ ಶರ್ಮಿಳಾ ಅವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು.