ಮಂಗಳೂರು: ಕ್ರಿಸ್ತ ಶಕ 1837ರಲ್ಲಿ ಬ್ರಿಟಿಷರ ವಿರುದ್ಧ ರೈತ ಸೇನೆ ಕಟ್ಟಿ, ಸ್ಮರಣೀಯ ಹೋರಾಟ ನಡೆಸಿದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಇದೇ ನವೆಂಬರ್ 19ರ ಶನಿವಾರ ಮುಖ್ಯಮಂತ್ರಿಗಳಿಂದ ಅದ್ದೂರಿಯಾಗಿ ಲೋಕಾರ್ಪಣೆಯಾಗಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.
ಅವರು ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಾಮಾನ್ಯರ ಮತ್ತು ರೈತರ ಮೇಲೆ ಬ್ರಿಟಿಷರ ಕ್ರೌರ್ಯ ಹಾಗೂ ದಬ್ಬಾಳಿಕೆಯನ್ನು ಸಹಿಸದೆ ಕೆದಂಬಾಡಿ ರಾಮಯ್ಯ ಗೌಡರು ಬ್ರಿಟಿಷರ ವಿರುದ್ಧ ರೈತ ಸೇನೆ ಕಟ್ಟಿ ರಣ ಕಹಳೆ ಮೊಳಗಿಸಿದ್ದರು, ಆ ಪರಿಣಾಮ ಬೆಳ್ಳಾರೆ, ಪುತ್ತೂರು, ಬಂಟ್ವಾಳ, ಮಂಗಳೂರು ಸೇರಿದಂತೆ ಕೆದಂಬಾಡಿ ರಾಮಯ್ಯ ಗೌಡರ ಮನೆಯಿಂದ ಹೊರಟ ಸೈನ್ಯ ಸುಮಾರು 90 ಕಿ.ಮೀ.ದೂರದ ಪ್ರದೇಶದಲ್ಲಿ ರಾಮಯ್ಯ ಗೌಡರ ನೇತೃತ್ವದಲ್ಲಿ 13 ದಿನಗಳ ಕಾಲ ಸ್ಥಾಪಿತ ಸರಕಾರವನ್ನು ಮುನ್ನಡೆಸಲಾಯಿತು, ಇದು ಭಾರತದ ನೆಲದಲ್ಲಿ ಬ್ರಿಟಿಷರಿಗೆ ಒದಗಿದ ಪ್ರಥಮ ಸೋಲು ಹಾಗೂ ಭಾರತದ ಸಾಮಾನ್ಯ ಜನರಿಗೆ ಬ್ರಿಟಿಷರ ವಿರುದ್ಧ ದೊರಕಿದ ಪ್ರಪ್ರಥಮ ಜಯ. ಈ ಹೋರಾಟದಲ್ಲಿ ಹುತಾತ್ಮರಾದ ಅವರು ಹೋರಾಟವನ್ನು ಶಾಶ್ವತವಾಗಿ ಭಾರತದ ಇತಿಹಾಸ ಪುಟಗಳಲ್ಲಿ ದಾಖಲಿಸಿ ಸ್ಮಾರಕ ನಿರ್ಮಾಣದ ಮೂಲಕ ಅವರ ಹೆಸರನ್ನು ಈ ನಾಡಿನಲ್ಲಿ ಶಾಶ್ವತವಾಗಿ ಉಳಿಸಲು ಮಂಗಳೂರಿನ ಚಾರಿತ್ರಿಕ ಸ್ಥಳವಾದ ಬಾವುಟಗುಡ್ಡೆಯಲ್ಲಿ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ನ.19ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿಯವರು ಅದ್ದೂರಿಯಾಗಿ ಲೋಕಾರ್ಪಣೆ ಮಾಡುವರು, ನಂತರ ನೆಹರೂ ಮೈದಾನದ ಫುಟ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಅಂದಾಜು 25,000ಕ್ಕೂ ಹೆಚ್ಚು ಜನರು ಭಾಗವಹಿಸುವರು, ಅಲ್ಲಿ ವಿವಿಧ ಇಲಾಖೆಗಳ ವತಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಹ ನೆರವೇರಿಸಲಾಗುವುದು, ಒಟ್ಟಾರೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಅಂದು ವಿವಿಧಡೆಯಿಂದ ಮಂಗಳೂರಿಗೆ ಬಸ್ಸುಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು, ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಹಾಗೂ ಸೂಕ್ತ ಭದ್ರತೆ ಒದಗಿಸುವಂತೆ ಸಂಚಾರ ವಿಭಾಗದ ಡಿಸಿಪಿ ದಿನೇಶ್ ಅವರಿಗೆ ಶಾಸಕರು ಸೂಚಿಸಿದರು.
ಜಿಲ್ಲೆಯ ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಈ ಕಾರ್ಯಕ್ರಮದಲ್ಲಿ ಸರ್ವ ಜನಾಂಗದವರು ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ಮಂಗಳೂರು ಮೇಯರ್ ಜಯಾನಂದ ಅಂಜನ್, ಉಪಮೇಯ ಪೂರ್ಣಿಮಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ರಮೇಶ್ ವೇದಿಕೆಯಲ್ಲಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರುಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಸೇರಿದಂತೆ ಆನಂದ್, ಸುರೇಶ್ ಬೈಲು, ಶರಣ್, ಭಾಸ್ಕರ್ ದೇವಪ್ಪ ಹಾಗೂ ಇತರೆ ಪದಾಧಿಕಾರಿಗಳು ಸಭೆಯಲ್ಲಿದ್ದರು.