Home ಟಾಪ್ ಸುದ್ದಿಗಳು ವಿದೇಶದಿಂದ ಬಂದ ಯುವಕನನ್ನು ಅಪಹರಿಸಿ ಕೊಲೆಗೈದು ಆರೋಪಿಗಳು ಪರಾರಿ

ವಿದೇಶದಿಂದ ಬಂದ ಯುವಕನನ್ನು ಅಪಹರಿಸಿ ಕೊಲೆಗೈದು ಆರೋಪಿಗಳು ಪರಾರಿ

ಕಾಸರಗೋಡು: ಭಾನುವಾರ ಮಧ್ಯಾಹ್ನ ಗಲ್ಫ್‌’ನಿಂದ ಹಿಂದಿರುಗಿದ್ದ ಯುವಕನೋರ್ವನನ್ನು, ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಆಸ್ಪತ್ರೆಯಲ್ಲಿರಿಸಿ ಪರಾರಿಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.


ದುಷ್ಕರ್ಮಿಗಳಿಂದ ಹತ್ಯೆಯಾದ ಯುವಕನನ್ನು ಅಬೂಬಕರ್ ಸಿದ್ದಿಕ್ [ 32] ಎಂದು ಗುರುತಿಸಲಾಗಿದೆ.
ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಮೃತ ಸಿದ್ದೀಕ್ ನ ಅಣ್ಣ ಅನ್ವರ್ ಮತ್ತು
ಸಂಬಂಧಿ ಅನ್ಸಾರ್ ಎಂಬ ಇಬ್ಬರು ಯುವಕರನ್ನು ಎರಡು ದಿನಗಳ ಹಿಂದೆ ಪೈವಳಿಕೆಯಲ್ಲಿರುವ ತಂಡವೊಂದು, ಅಪಹರಿಸಿತ್ತು. ಇವರನ್ನು ಬಿಡುಗಡೆ ಮಾಡಬೇಕಾದರೆ, ಗಲ್ಫ್‌’ನಲ್ಲಿದ್ದ ಸಿದ್ದೀಕ್ ರನ್ನು ಊರಿಗೆ ಕರೆಸಬೇಕು ಎಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಸಿದ್ದೀಕ್ ಭಾನುವಾರ ಊರಿಗೆ ಬಂದಿದ್ದರು. ಊರಿಗೆ ಬಂದ ಕೆಲ ಗಂಟೆಗಳಲ್ಲೇ ಸಿದ್ದೀಕ್ ಮನೆಯಿಂದಲೇ ಅಪಹರಣಕ್ಕೊಳಗಾಗಿದ್ದರು. ಬಳಿಕ ಸಂಜೆಯ ವೇಳೆಗೆ ಬಂದ್ಯೋಡು ಎಂಬಲ್ಲಿರುವ ಡಿಎಂ ಆಸ್ಪತ್ರೆಗೆ ಸಿದ್ದೀಕ್’ರನ್ನು ಕರೆತಂದ ಅಪಹರಣಕಾರರು, ಆತ ಮೃತಪಟ್ಟಿದ್ದಾನೆ ಎಂದು ತಿಳಿಯುತ್ತಲೇ ಸ್ಥಳದಿಂದ ಪರಾರಿಯಾಗಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗಿದೆ.
ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಅನ್ವರ್ ಮತ್ತು ಅನ್ಸಾರ್
ಸ್ಥಿತಿಯೂ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲಿಸ್ ಮೂಲಗಳು ತಿಳಿಸಿವೆ.

Join Whatsapp
Exit mobile version