Home ಟಾಪ್ ಸುದ್ದಿಗಳು ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿ ಡಾ. ಸತೀಶ್ ಸಾವಿನಿಂದ ತನಿಖೆಗೆ ಹಿನ್ನಡೆ

ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿ ಡಾ. ಸತೀಶ್ ಸಾವಿನಿಂದ ತನಿಖೆಗೆ ಹಿನ್ನಡೆ

ಮಂಡ್ಯ: ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಸಮನ್ಸ್ ನೀಡಲಾಗಿದ್ದ ಆಯುರ್ವೇದಿಕ್ ವೈದ್ಯ ಡಾ.ಸತೀಶ್ ದಿಢೀರ್ ಸಾವಿಗೀಡಾಗಿದ್ದು, ಭ್ರೂಣ ಹತ್ಯೆ ತನಿಖೆಗೆ ಹಿನ್ನೆಡೆ ಉಂಟಾದಂತಾಗಿದೆ ಎಂದು ಹೇಳಲಾಗಿದೆ. ಸತೀಶ್ ಸಾವಿನೊಂದಿಗೆ ಪ್ರಕರಣದ ಬಗೆಗಿನ ಅನೇಕ ಸತ್ಯ ಸಂಗತಿಗಳು ಸಮಾಧಿಯಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಡಾ. ಸತೀಶ್ ಸಾವಿನ ಬಗ್ಗೆಯೂ ಅನುಮಾನ ಹುಟ್ಟಿಕೊಂಡಿದೆ.

ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ನಡೆಯುತ್ತಿತ್ತು ಎನ್ನಲಾದ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಒಂದೇ ಒಂದು ಕುರುಹು ಸಿಕ್ಕಿಲ್ಲ. ಸ್ಥಳೀಯವಾಗಿ ಯಾರು ಇದಕ್ಕೆ ಸಹಕಾರ ನೀಡುತ್ತಿದ್ದರೆಂಬ ಬಗ್ಗೆ ಮಾಹಿತಿಯೂ ಇಲ್ಲ. ವೈದ್ಯಾಧಿಕಾರಿಗಳು ಭ್ರೂಣ ಹತ್ಯೆ ತಂಡಕ್ಕೆ ನೆರವಾಗಿ ನಿಂತಿದ್ದರೇ ಎನ್ನುವುದೂ ತಿಳಿದಿಲ್ಲ. ಬೈಯ್ಯಪ್ಪನಹಳ್ಳಿ ಪೊಲೀಸರು ಆಲೆಮನೆ ಮಾಲೀಕರನ್ನು ಹೊರತುಪಡಿಸಿದರೆ ಸ್ಥಳೀಯವಾಗಿ ಇನ್ಯಾರನ್ನೂ ಬಂಧಿಸಿಲ್ಲ. ಸಣ್ಣ ಸುಳಿವನ್ನೂ ಬಿಡದೆ ಚಾಕಚಕ್ಯತೆಯಿಂದ ದಂಧೆ ನಡೆಸುತ್ತಿದ್ದರು ಎನ್ನುವುದು ಪ್ರಕರಣ ಬಯಲಿಗೆ ಬಂದ ನಂತರ ಜಿಲ್ಲಾಡಳಿತ ನಡೆಸಿದ ಪರಿಶೀಲನೆಯಿಂದ ಕಂಡುಬಂದಿದೆ.

ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಡಾ.ಸತೀಶ್‌ಗೆ ಇತ್ತು ಎಂದು ಪೊಲೀಸರು ಶಂಕಿಸಿದ್ದರು. ಮಂಡ್ಯ ಸಮೀಪವಿರುವ ಶಿವಳ್ಳಿಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದ ಡಾ.ಸತೀಶ್ ಮೇಲೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಆಲೆಮನೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಿಗೂ ಡಾ.ಸತೀಶ್ ಅವರಿಗೂ ಸಂಬಂಧವಿತ್ತು ಎಂದು ಸಂಘಟನೆಗಳು ಆರೋಪಿಸಿದ್ದವು. ಆದರೆ, ಈ ಪ್ರಕರಣದಲ್ಲಿ ಡಾ.ಸತೀಶ್ ನೇರ ಪಾತ್ರವಿರುವುದು ಎಲ್ಲಿಯೂ ಕಂಡುಬಂದಿರಲಿಲ್ಲ. ಆದದರಿಂದ ಬಂಧಿಸುವ ಹಾಗಿರಲಿಲ್ಲ. ವರ್ಷದ ಹಿಂದೆ ಮಂಡ್ಯದ ನಮ್ಮ ಮನೆ-ನಮ್ಮ ಕ್ಲಿನಿಕ್‌ನಲ್ಲಿ ನಡೆದಿದ್ದ ಭ್ರೂಣಹತ್ಯೆ ಪ್ರಕರಣದಲ್ಲಿ ಇವರನ್ನೂ ಆರೋಪಿಯನ್ನಾಗಿ ಪರಿಗಣಿಸಲಾಗಿತ್ತು ಎನ್ನಲಾಗಿದೆ. ಆಲೆಮನೆಯಲ್ಲಿ ಭ್ರೂಣಹತ್ಯೆ ಬೆಳಕಿಗೆ ಬಂದ ನಂತರದಲ್ಲಿ ಡಾ.ಸತೀಶ್ ಬಗ್ಗೆ ಅನುಮಾನಗಳು ಹೆಚ್ಚಾಗಿ ಆತನನ್ನು ವಿಚಾರಣೆ ಕರೆತರುವುದಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದರು. ಅನೇಕ ಮಹತ್ವದ ಸಂಗತಿಗಳು ಸತೀಶ್ ಮೂಲಕ ಪಡೆಯಲು ಪೊಲೀಸರು ಮುಂದಾಗಿದ್ದರು. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಆಲೆಮನೆ ಮೇಲೆ ದಾಳಿ ನಡೆಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೂಡ ನೀಡಿದ್ದರು. ಅದರ ಬೆನ್ನಹಿಂದೆಯೇ ಇದ್ದಕ್ಕಿದ್ದಂತೆ ಡಾ.ಸತೀಶ್‌ ಕುಶಾಲನಗರ ತಾಲೂಕಿನ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಡಾ. ಸತೀಶ್ ಸಾವು ಸಂಭವಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಲ್ಲದೆ, ಪ್ರಸ್ತುತ ತನಿಖೆಗೆ ಹಿನ್ನಡೆಯಾಗಿದೆ ಎಂದು ಅಂದಾಜಿಸಲಾಗಿದೆ.

Join Whatsapp
Exit mobile version