Home ಟಾಪ್ ಸುದ್ದಿಗಳು ಇಂದು ಮಿಜೋರಾಂ ಚುನಾವಣೆಯ ಫಲಿತಾಂಶ

ಇಂದು ಮಿಜೋರಾಂ ಚುನಾವಣೆಯ ಫಲಿತಾಂಶ

ಐಜ್ವಾಲ್‌: ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಇಂದು ನಡೆಯಲಿದೆ. ರಾಜ್ಯದಾದ್ಯಂತ 13 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.

ಐದು ರಾಜ್ಯಗಳಲ್ಲಿ ನಾಲ್ಕರ ಫಲಿತಾಂಶ ನಿನ್ನೆ ಬಂದಿತ್ತು. ಬಿಜೆಪಿ ಅನಿರೀಕ್ಷಿತವಾಗಿ ಮೂರು ರಾಜ್ಯಗಳಲ್ಲಿ ಜರಭೇರಿ ಬಾರಿಸಿದ್ದು, ಕಾಂಗ್ರೆಸ್ ತೆಲಂಗಾಣದ ವಿಜಯವೊಂದಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಮಿಜೋರಾಂ ಮತ ಎಣಿಕೆಯೂ ನಿನ್ನೆನೇ ನಡೆಯಬೇಕಿತ್ತು. ಆದರೆ ಕ್ರೈಸ್ತ ಧರ್ಮೀಯರೇ ಹೆಚ್ಚಾಗಿರುವ ರಾಜ್ಯದಲ್ಲಿ ಜನರು ಭಾನುವಾರದಂದು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮತ ಎಣಿಕೆ ದಿನಾಂಕವನ್ನು ಮುಂದೂಡಲು ಆಯೋಗಕ್ಕೆ ಮನವಿ ಬಂದಿತ್ತು. ಈ ಕಾರಣಕ್ಕಾ್ಲಗಿ ಸೋಮವಾರಕ್ಕೆ ಮುಂದೂಡಲಾಗಿತ್ತು.

ಮಿಜೋರಾಂನ ವಿಧಾನಸಭೆಯ 40 ಸ್ಥಾನಗಳಿಗೆ ನವೆಂಬರ್ 8 ರಂದು ನಡೆದಿದ್ದ ಚುನಾವಣೆಯಲ್ಲಿ ಶೇಕಡ 80.43 ರಷ್ಟು ಮತದಾನವಾಗಿದೆ. ಶೇಕಡ 79.61ರಷ್ಟು ಪುರುಷರು ಮತ ಚಲಾಯಿಸಿದ್ದರೆ, ಶೇಕಡ 81.21 ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ.

8.57 ಲಕ್ಷ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಎಂಎನ್‌ಎಫ್, ಝಡ್‌ಪಿಎಂ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ಫಲಿತಾಂಶದ ಮೇಲೆ ಕುತೂಹಲ ಹೆಚ್ಚಿದೆ.

Join Whatsapp
Exit mobile version