ಜೈಪುರ: ದಲಿತ ಕಾಂಗ್ರೆಸ್ ಶಾಸಕನೋರ್ವ ದೇವಾಲಯಕ್ಕೆ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ದೇವಾಲಯ ಶುದ್ಧೀಕರಣ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ದಲಿತ ಶಾಸಕ ಪ್ರವೇಶಿಸಿದ್ದಕ್ಕಾಗಿ ದೇವಾಲಯ ಶುದ್ಧೀಕರಣ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ.
ರಾಮನವಮಿ ಅಂಗವಾಗಿ ಅಲ್ವಾರ್ ನಲ್ಲಿ ದೇವಾಲಯವೊಂದರಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ನ ದಲಿತ ನಾಯಕ ಟಿಕಾರಾಮ್ ಜುಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ‘ಗಂಗಾಜಲ’ ಸಿಂಪಡಿಸಿ ದೇವಾಲಯದ ಆವರಣವನ್ನು “ಶುದ್ಧೀಕರಣ” ಮಾಡಿದ್ದಾರೆ.
ದಲಿತ ಮತದಾರರು ಪ್ರಮುಖ ಪಾತ್ರ ವಹಿಸುವ ಪೂರ್ವ ರಾಜಸ್ಥಾನದಲ್ಲಿ ಜ್ಞಾನದೇವ್ ಅಹುಜಾ ಅವರ ‘ಶುದ್ಧೀಕರಣ’ದ ಸಾಹಸ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ,ಅಹುಜಾ ಅವರಿಗೆ ನೋಟಿಸ್ ಕಳುಹಿಸಿದೆ. ಬಿಜೆಪಿ ಸಂಸದ ಮತ್ತು ರಾಜಸ್ಥಾನದ ಹಿರಿಯ ನಾಯಕ ದಾಮೋದರ್ ಅಗರ್ವಾಲ್ ಅವರು ನೀಡಿದ ನೋಟಿಸ್‌ನಲ್ಲಿ ಅಹುಜಾ ಅವರಿಂದ ಮೂರು ದಿನಗಳಲ್ಲಿ ವಿವರಣೆಯನ್ನು ಕೋರಿದೆ.
ಮಾಜಿ ಶಾಸಕರು ಮೂರು ದಿನಗಳಲ್ಲಿ ರಾಜ್ಯ ಪಕ್ಷದ ಮುಖ್ಯಸ್ಥ ಮದನ್ ರಾಥೋಡ್‌ಗೆ ತಮ್ಮ ಪ್ರತಿಕ್ರಿಯೆಯನ್ನು ಕಳುಹಿಸದಿದ್ದರೆ, ಅವರು ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
“ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತೆಗೆದುಕೊಳ್ಳುವಾಗ, ಜಾತಿ, ಲಿಂಗ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ನೀವು ಪ್ರಮಾಣವಚನ ಸ್ವೀಕರಿಸಿದ್ದೀರಿ. ಆದರೆ ಟಿಕರಾಮ್ ಜಲ್ಲಿ ಅವರ ಭೇಟಿಯನ್ನು ಪ್ರತಿಭಟಿಸಲು ನೀವು ‘ಗಂಗಾಜಲ’ ಸಿಂಪಡಿಸಿದ್ದೀರಿ. ನಿಮ್ಮ ಕ್ರಮವು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ ಮತ್ತು ಅಶಿಸ್ತಿನ ವರ್ಗಕ್ಕೆ ಸೇರುತ್ತದೆ” ಎಂದು ನೋಟಿಸ್ ಹೇಳಿದೆ.