ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಬಿಸಿಲ ತಾಪಕ್ಕೆ ತತ್ತರಿಸಿ ಹೋಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಐವರು ಮೃತರಾಗಿದ್ದಾರೆ. 12ಕ್ಕೂ ಅಧಿಕ ಜನರು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಬಿಸಿಲ ತಾಪಕ್ಕೆ ಅಸ್ವಸ್ಥಗೊಂಡು ಸುಮಾರು 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ ಐವರು ಸಾವನ್ನಪ್ಪಿದ್ದಾರೆ. ಹನ್ನೆರಡು ಐಸಿಯುನಲ್ಲಿದ್ದಾರೆ ಎಂದು ಲೋಹಿಯಾ ಆಸ್ಪತ್ರೆಯ ವರಿಷ್ಠ ಡಾ. ಅಜಯ್ ಶುಕ್ಲಾ ಮಾಧ್ಯಮಕ್ಕೆ ತಿಳಿಸಿದ್ದಾರೆ.ಹೀಟ್ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ರಾತ್ರಿ ವೇಳೆಯೇ ತಾಪಮಾನ 35 ಡಿಗ್ರಿ ತಲುಪಿದ್ದು ಸಾಮಾನ್ಯ ತಾಪಮಾನಕ್ಕಿಂತ ಇದು ಹಲವು ಡಿಗ್ರಿಗಳಷ್ಟು ಹೆಚ್ಚಾಗಿದೆ. ವಾತಾವರಣವನ್ನು ತಂಪು ಮಾಡುವುದಕ್ಕೆ ಏರ್ ಕೂಲರ್ ಗಳಿಂದಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂದಿನ 24 ಗಂಟೆಗಳ ಕಾಲ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಶಾಖದ ಅಲೆಗಳು ಮುಂದುವರಿಯುವ ಸಾಧ್ಯತೆಯಿದೆ ಮತ್ತು ಅದರ ನಂತರ ಕಡಿಮೆಯಾಗುತ್ತದೆ ಎಂದು ಹವಾಮಾನ ಕಚೇರಿ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.