ವಿಮಾನ ನಿಲ್ದಾಣದಲ್ಲಿ ಉಮ್ರಾ ಯಾತ್ರಾರ್ಥಿಯಿಂದ ಹಣ ಕಳವು: ಉನ್ನತ ತನಿಖೆಗೆ ತುರವೇ ಒತ್ತಾಯ

Prasthutha|

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಬದ್ರುದ್ದೀನ್ ಕದಂಬಾರ್ ಎಂಬವರ ಟ್ರಾಲಿ ಬ್ಯಾಗ್‌ನಿಂದ 6 ಲಕ್ಷ ಮೌಲ್ಯದ ಸೌದಿ ರಿಯಾಲ್ ಕಳವು ಆಗಿದ್ದು, ಈ ಬಗ್ಗೆ ಉನ್ನತ ತನಿಖೆಯಾಗಬೇಕೆಂದು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಒತ್ತಾಯಿಸಿದ್ದಾರೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ವಿಮಾನ ನಿಲ್ದಾಣದಲ್ಲಿ ಹಣ ಕಳವು ಆದ ಬಗ್ಗೆ ಮಾಹಿತಿ ನೀಡಿದರು.

ಬದ್ರುದ್ದೀನ್ ಕಡಂಬಾರ್ ಎನ್ನುವವರು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಹೆಂಡತಿ, ಮಕ್ಕಳ ಜೊತೆ ವಾಸವಾಗಿದ್ದು ಮದುವೆ ಸಮಾರಂಭಗಳಿಗೆ ಜ್ಯೂಸ್ ತಯಾರಿಸಿ ಕೊಡುವ ಕೆಲಸ ಮಾಡಿಕೊಂಡಿರುತ್ತಾರೆ. ಈ ಹಿಂದೆ ಸುಮಾರು 25 ವರ್ಷಗಳ ಕಾಲ ಸೌದಿ ಅರೇಬಿಯದಲ್ಲಿ ಕೆಲಸ ಮಾಡಿದ್ದರಿಂದ ಅಲ್ಲಿನ ಬಹುತೇಕ ಪ್ರದೇಶಗಳ ಪರಿಚಯವಿದ್ದು, ಅರೇಬಿಕ್ ಭಾಷೆ ಬಲ್ಲವರಾಗಿರುತ್ತಾರೆ. ಸುಮಾರು ಒಂದು ವರ್ಷದ ಹಿಂದೆ ಅವರ ಪರಿಚಯದ ಅತ್ತಾವರದ ನಿವಾಸಿ ಅಜಾದ್ ಟ್ರಾವೆಲ್ಸ್‌ನ ಮಾಲಕ ಇಕ್ಬಾಲ್‌ ಅವರಿಗೆ ಸೌದಿ ಅರೇಬಿಯದ ಪ್ರದೇಶಗಳ ಜ್ಞಾನ ಮತ್ತು ಅರೇಬಿಕ್ ಭಾಷೆ ತಿಳಿದಿದ್ದರಿಂದ ಹಜ್ ಮತ್ತು ಉಮ್ರಾ ಯಾತ್ರೆಗೆ ಹೋಗುವ ಪ್ರಯಾಣಿಕರ ಜೊತೆ ಗೈಡ್ ಮತ್ತು ಅಡುಗೆ ಮಾಡುವ ಕೆಲಸಕ್ಕೆ ಬರುವಂತೆ ಕೋರಿಕೊಂಡಿರುತ್ತಾರೆ.

- Advertisement -

ಅವರ ಕೋರಿಕೆಗೆ ಒಪ್ಪಿ ಈ ಹಿಂದೆ ಬದ್ರುದ್ದೀನ್ ಅವರು 3 ಬಾರಿ ಇಕ್ಬಾಲ್‌ರವರ ಜೊತೆ ಉಮ್ರಾ ಯಾತ್ರೆಗೆ ಪ್ರಯಾಣಿಕರ ಜೊತೆ ಹೋಗಿರುತ್ತಾರೆ.

ದಿನಾಂಕ 3೦-04-2024 ರಂದು ಅಜಾದ್ ಟ್ರಾವೆಲ್ಸ್ ಮೂಲಕ ಒಟ್ಟು 34 ಪ್ರಾಯಣಿಕರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಮಾರ್ಗವಾಗಿ ಸೌದಿ ಅರೇಬಿಯದ ಜಿದ್ದಾ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣಕ್ಕೆ ಕರೆದುಕೊಂಡು ಹೋಗಲು ಬದ್ರುದ್ದೀನ್‌ಗೆ ಒಪ್ಪಿಸಿದ್ದಾರೆ.11 ಜನ ವಯಸ್ಸಾದ ಪ್ರಯಾಣಿಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ನೀಡಿದ ಇಕ್ಬಾಲ್ ಆ ಖರ್ಚು ವೆಚ್ಚಗಳಿಗೆ 26,432 ಸೌದಿ ರಿಯಾಲ್ (ಸುಮಾರು 6 ಲಕ್ಷ ರೂಪಾಯಿ ಭಾರತೀಯ ಮೌಲ್ಯ) ಹಣವನ್ನು ಬದ್ರುದ್ದೀನ್‌‌ಗೆ ನೀಡಿದ್ದಾರೆ. ಬದ್ರುದ್ದೀನ್ ಈ ಹಣವನ್ನು ತನ್ನ ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿದ್ದಾರೆ.

ದಿನಾಂಕ 30-04-2024 ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11 ಜನ ಪ್ರಯಾಣಿಕರ ಟ್ರಾಲಿ ಬ್ಯಾಗನ್ನು ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಅದರಂತೆ ಹಣವಿದ್ದ ಟ್ರಾಲಿ ಬ್ಯಾಗನ್ನು ಲಗೇಜ್ ಮಾಡಿದ್ದಾರೆ.

ಸಂಜೆ 5.30 ಗಂಟೆಗೆ ಮಂಗಳೂರಿನಿಂದ
ಮುಂಬೈಗೆ ಹೊರಟ ಇಂಡಿಗೊ ವಿಮಾನ ಸಂಜೆ 6.46 ಕ್ಕೆ ಮುಂಬೈ ತಲುಪಿದೆ. ಮುಂಬೈನಿಂದ ಇಂಡಿಗೊ ವಿಮಾನದಲ್ಲಿ 01-05-2024ರಂದು ರಾತ್ರಿ ಸುಮಾರು 10.25ಕ್ಕೆ ಹೊರಟು ರಾತ್ರಿ 1.30 ಗಂಟೆಗೆ ಜೆದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.

ಟ್ರಾಲಿ ಬ್ಯಾಗನ್ನು ವಿಮಾನ ನಿಲ್ದಾಣದಿಂದ ಹೊರಗಡೆ ತೆಗೆದುಕೊಂಡು ಹೋಗಿ ನೋಡಿದಾಗ ಅವರ ಟ್ರಾಲಿ ಬ್ಯಾಗಿನ ಚಿಕ್ಕ ಬೀಗವನ್ನು ಮುರಿದು ಅದರಲ್ಲಿದ್ದ 26432 ಸೌದಿ ರಿಯಲ್ ಹಣ ಕಳವು ಮಾಡಿರುವುದು ಕಂಡು ಬಂದಿದೆ. ಬದ್ರುದ್ದೀನ್ ಉಮ್ರಾ ಯಾತ್ರೆ ಮುಗಿಸಿ ಬಂದು 30-05-2024 ರಂದು ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್.ಐ.ಆರ್ ದಾಖಲಾಗಿದೆ. ಆದರೆ ಈ ಕ್ಷಣದವರೆಗೂ ಈ ಕೇಸ್‌ನಲ್ಲಿ ಸಂತ್ರಸ್ತ ಬದ್ರುದ್ದೀನ್ ರವರಿಗೆ ನ್ಯಾಯ ಸಿಗಲಿಲ್ಲ ಎಂದು ಯೋಗೀಶ್ ಜೆಪ್ಪು ಮಾಹಿತಿ ನೀಡಿದರು.

ತುಳುನಾಡ ರಕ್ಷಣಾ ವೇದಿಕೆಯನ್ನು ಸಂಪರ್ಕಿಸಿದ ಬದ್ರುದ್ದೀನ್ ಕಾನೂನು ಹೋರಾಟಕ್ಕೆ ಬೆಂಬಲಿಸುವಂತೆ ವಿನಂತಿಸಿರುತ್ತಾರೆ. ಆದುದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು, ವಿಮಾನಯಾನ ಸಚಿವರಿಗೆ ನಾವು ಮನವಿಯನ್ನು ಸಲ್ಲಿಸಿದ್ದೇವೆ. ವಿಮಾನ ನಿಲ್ದಾಣದ ಕಳ್ಳತನದ ಜಾಲವನ್ನು ಭೇದಿಸುವಂತೆ ಒತ್ತಾಯಿಸಿರುತ್ತೇವೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಎದುರುಗಡೆ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಹಾಗೂ ಟ್ರೂರ‍್ಸ್ ಟ್ರಾವೆಲ್ಸ್ ರವರ ಸಹಕಾರದೊಂದಿಗೆ ಪ್ರತಿಭಟನಾ ಸಭೆ ಕೈಗೊಳ್ಳುವುದಾಗಿಯೂ ಯೋಗೀಶ್ ತಿಳಿಸಿದರು.

ಹಣ ಕಳೆದುಕೊಂಡಿರುವ ಬದ್ರುದ್ದೀನ್ ಸೌದಿ ಅರೇಬಿಯಾದಲ್ಲಿ ಅನುಭವಿಸಿದ ತನ್ನ ಸಂಕಷ್ಟಗಳನ್ನು ಇದೇ ಸಂದರ್ಭ ಹಂಚಿಕೊಂಡರು. ಅಜಾದ್ ಟೂರ್ಸ್ ಅಂಡ್ ಟ್ರಾವೆಲ್ಸ್ ಏಜೆಂಟ್ ಇಕ್ಬಾಲ್, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಳ್ಳಾಲ ತಾಲೂಕು ಗೌರವಾಧ್ಯಕ್ಷ ಡಾಕ್ಟರ್ ಶೇಕ್ ಭಾವ ಉಳ್ಳಾಲ, ತಾಲೂಕು ಪ್ರಧಾನ ಕಾರ್ಯದರ್ಶಿ ಸುಕೇಶ್ ಉಚ್ಚಿಲ್ ಜಿಕೆ, ಝಾಕಿರ್ ಇಕ್ಲಾಸ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version